ಲಾಸ್ ಏಂಜಲೀಸ್: ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ಎಂಬ ಸಾಮಾಜಿಕ ಜಾಲತಾಣ ಕೆಟ್ಟದ್ದಕ್ಕೆ, ಒಳ್ಳೆಯದಕ್ಕೆ ಎರಡರಿಂದಲೂ ಸುದ್ದಿ ಮಾಡುತ್ತಿದೆ. ಫೇಸ್ ಬುಕ್ ನಿಂದ ಹಲವು ಸಂಬಂಧ ಹಾಳಾಗಿವೆ. ಹಾಗೆಯೇ ಹಲವು ಸಂಬಂಧ ಬೆಸೆದುಕೊಂಡಿವೆ. ಫೇಸ್ ಬುಕ್ ನಿಂದಾಗಿ 15 ವರ್ಷ ದೂರಾಗಿದ್ದ ತಾಯಿ ಮಗ ಮತ್ತೆ ಒಂದಾಗಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. ತನ್ನ ತಂದೆಯಿಂದಲೇ ಕಿಡ್ನಾಪ್ ಆಗಿದ್ದ ಮೂರು ವರ್ಷದ ಬಾಲಕನ 15 ವರ್ಷಗಳ ನಂತರ ಮತ್ತೆ ತನ್ನ ತಾಯಿ ಬಳಿ ಸೇರಿದ್ದಾನೆ.
ಕ್ಯಾಲಿಪೋರ್ನಿಯಾದ ಹೋಪ್ ಹಾಲಂಡ್ ಎಂಬಾಕೆ 15 ವರ್ಷಗಳ ನಂತರ ತನ್ನ ಮಗ ಜೋನಾಥನ್ ನನ್ನು ಮತ್ತೆ ಸೇರಿದ್ದಾಳೆ. 2000 ಇಸವಿಯಲ್ಲಿ 3ವರ್ಷದ ಬಾಲಕನಾಗಿದ್ದ ಜೋನಾಥನ್ ನನ್ನು ಆತನ ತಂದೆ ಕಿಡ್ನಾಪ್ ಮಾಡಿ ಮೆಕ್ಸಿಕೊ ಗಡಿಭಾಗಕ್ಕೆ ಪರಾರಿಯಾಗಿದ್ದ.
ಇನ್ನೇನು ತನ್ನ ಮಗ ತನಗೆ ಸಿಗುವುದಿಲ್ಲ ಎಂದು ನಿರಾಸೆಗೊಂಡಿದ್ದ ತಾಯಿಗೆ ಫೇಸ್ ಬುಕ್ ನಿಂದ ತನ್ನ ಆಸೆಗೆ ಮತ್ತೆ ಜೀವ ಬಂದಿದೆ.
ಜೋನಾಥನ್ ತನ್ನ ತಾಯಿ ತಂದೆ ಮತ್ತು ಅಣ್ಣನ ಜೊತೆಗಿದ್ದ ಫ್ಯಾಮಿಲಿ ಫೋಟೋವನ್ನು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದ. ಈ ಫೋಟೋವನ್ನು ತಾಯಿ ಮತ್ತು ಜೋನಾಥನ್ ಅಣ್ಣ ನೋಡಿದ್ದಾರೆ. ಹೀಗಾಗಿ 15 ವರ್ಷಗಳ ಹಿಂದೆ ಕಡಿದು ಹೋಗಿದ್ದ ಕರುಳ ಸಂಬಂಧ ಮತ್ತೆ ಬೆಸೆದುಕೊಂಡಿದೆ. ತನ್ನ ತಾಯಿಯನ್ನು ಸೇರಿದ ಖುಷಿಯಲ್ಲಿ ಮಗ, ಮಗನನ್ನು ಸೇರಿದ ಖುಷಿಯಲ್ಲಿ ತಾಯಿಯ ಸಂತೋಷದಿಂದ ಇದ್ದಾರೆ.