ಇಸ್ಲಾಮಾಬಾದ್: ಮುಂಬೈ ದಾಳಿಯ ರುವಾರಿ ಹಫೀಜ್ ಸಯೀದ್ ನ ಜಮಾತ್- ಉದ್- ದವಾ ಉಗ್ರ ಸಂಘಟನೆಯನ್ನು ನಿಷೇಧಿಸುವ ಸಾಧ್ಯತೆಯನ್ನು ಪಾಕಿಸ್ತಾನ ತಳ್ಳಿಹಾಕಿದೆ. ಹಫೀಜ್ ಸಯೀದ್ ನೇತೃತ್ವದ ಸಂಘಟನೆ ಉಗ್ರ ಚಟುವಟಿಕೆಗಳಲ್ಲಿ ತೊಡಗಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಾಧಾರಗಳಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ಪಾಕಿಸ್ತಾನದ ಸಂಸತ್ ನಲ್ಲಿ ಹಫೀಜ್ ಸಯೀದ್ ನೇತೃತ್ವದ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ನಡೆದ ಚರ್ಚೆ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ ರಾಜ್ಯ ಸಚಿವ, ಅಬ್ದುಲ್ ಖಾದಿರ್ ಬಲೊಚ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜಮಾತ್- ಉದ್- ದವಾ ಹೆಸರಿನಲ್ಲಿ ನಿಷೇಧಿತ ಉಗ್ರ ಸಂಘಟನೆ ಲಷ್ಕರ್-ಎ- ತೋಯ್ಬಾ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ. ಆದರೆ ಈ ಆರೋಪಕ್ಕೆ ಸೂಕ್ತ ದಾಖಲೆಗಳಿಲ್ಲ ಎಂದು ಹೇಳಿರುವುದನ್ನು ಡಾನ್ ಪತ್ರಿಕೆ ವರದಿ ಮಾಡಿದೆ.
ಹಫೀಜ್ ಸಯೀದ್ ನ ಸಂಘಟನೆಯನ್ನು ಪಾಕಿಸ್ತಾನದ ಅಧಿಕಾರಿಗಳು ಗಮನಿಸುತ್ತಿದ್ದಾರೆ. 2003 ರ ನವೆಂಬರ್ 15 ರಿಂದಲೂ ಭಯೋತ್ಪಾದನಾ ತಡೆ ಕಾಯ್ದೆ ಅಡಿಯಲ್ಲಿ ಜೆಯುಡಿ ಸಂಘಟನೆಯ ಕಾರ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಬ್ದುಲ್ ಖಾದಿರ್ ಬಲೋಚ್ ಮಾಹಿತಿ ನೀಡಿದ್ದಾರೆ. ಯಾವುದೇ ಸಂಘಟನೆಗಳ ಬಗ್ಗೆ ಭಯೋತ್ಪಾದನ ಚಟುವಟಿಕೆ ಕುರಿತು ಅನುಮಾನ ಬಂದರೆ ಅವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತೇವೆ. ಆದರೆ ಹಫೀಜ್ ಸಯೀದ್ ನ ಸಂಘಟನೆ ಭಯೋತ್ಪಾದನಾ ಚಟುವಟಿಯಲ್ಲಿ ತೊಡಗಿದೆ ಎಂಬುದನ್ನು ಸಾಕ್ಷಾಧಾರಗಳು ಇಲ್ಲ ಎಂದಿದೆ.