ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
ಪ್ಯೋಂಗ್ಯಂಗ್: ಇದು ಚೌರ್ಯದ ಸುದ್ದಿ ಅಲ್ಲ ಚೌರದ ಸುದ್ದಿ. ಉತ್ತರ ಕೊರಿಯದ ಜಾಂಗ್ ಸರ್ಕಾರ ಒಂದಿಲ್ಲೊಂದು ತಮಾಷೆ ಸುದ್ದಿಗೆ ಸದಾ ಕಾರಣವಾಗುತ್ತಿರುತ್ತದೆ. ಇದು ಒಂದು ರೀತಿಯ ಸರ್ವಾಧಿಕಾರವೆನಿಸುವಂಥ ಸುದ್ದಿಯೇ.
ಓದುವವರಿಗೆ ಚೆಲ್ಲಾಟ, ಅನುಭವಿಸುವವರಿಗೆ ಪ್ರಾಣಸಂಕಟ ಅನ್ನಬಹುದು. ಕೊರಿಯದಲ್ಲಿ ಇನ್ನು ಮುಂದೆ ಅಲ್ಲಿನ ಜನರ ಹೇರ್‍ಕಟ್ ಹೇಗಿರಬೇಕು ಎಂಬುದನ್ನು ಸರ್ಕಾರ ನಿರ್ಧರಿಸಲಿದೆಯಂತೆ. ಸ್ತ್ರೀಯರ ಮತ್ತು ಪುರುಷರ ಕೂದಲು ಎಷ್ಟು ಉದ್ದ ಇರಬೇಕು, ಕೇಶವಿನ್ಯಾಸ ಹೇಗಿರಬೇಕು ಎಲ್ಲವೂ ಸರ್ಕಾರದ ಇಚ್ಛೆಯ ಅನ್ವಯ ಪಾಲಿಸಬೇಕಿದೆ. 28 ಮಾದರಿಯ ಹೇರ್‍ಕಟ್ ಗಳನ್ನು ಸರ್ಕಾರ ಚಿತ್ರಸಹಿತವಾಗಿ ನೀಡಿದ್ದು, ಅವುಗಳನ್ನು ಹೊರತುಪಡಿಸಿ ಇನ್ಯಾವ ಕೇಶ ವಿನ್ಯಾಸವೂ ಮಾಡುವಂತಿಲ್ಲ ಎಂದು ಕಡ್ಡಾಯಗೊಳಿಸಿದೆ.
ಹೆಣ್ಮಕ್ಕಳಿಗೆ 18 ಸ್ಟೈಲ್: ಫ್ಯಾಷನ್ ಪ್ರಿಯ ಯುವತಿಯರು ತಮಗೆ ಮನಬಂದಂತೆ ಹೇರ್‍ಕಟ್ ಮಾಡಿಸುವಂತಿಲ್ಲ. ವೆಬ್ ಸೈಟ್ ಅಥವಾ ಇತರೆ ದೇಶಗಳವರನ್ನು ನೋಡಿ ಅನುಕರಿಸುವಂತಿಲ್ಲ. ಸರ್ಕಾರ ಕೊಟ್ಟಿರುವ 18 ಶೈಲಿಯ ಹೇರ್‍ಕಟ್ ಹೊರತುಪಡಿಸಿ ಇನ್ಯಾವ ಪ್ರಯೋಗಕ್ಕೂ ಅವಕಾಶವಿಲ್ಲ. 18 ಸ್ಟೈಲುಗಳೂ ದೇಶಪ್ರೇಮ ಸೂಚಿಸುವಂತಿದ್ದು, ಅವಿವಾಹಿತ ಯುವತಿಯರಿಗೆ ಕೊಂಚ ಹಿಡಿತ ಸಡಿಲಿಸಲಾಗಿದೆ. ಅತಿ ಗಿಡ್ಡ ಕಟಿಂಗ್, ಹೆಗಲ ಮೇಲಿನ ತನಕ ಇಳಿಬಿಟ್ಟ ಕೂದಲು ಅದಕ್ಕೊಂದು ಕಡ್ಡಾಯ ರಿಂಗ್, ಕ್ಲಾಸ್ ಎನಿಸುವಂಥ ಗುಂಗುರು ಗೊಳಿಸಿಕೊಳ್ಳುವುದು ಹೀಗೆ ಒಟ್ಟು 18 ಸ್ಟೈಲ್ ಮಾಡಲು ಅವಕಾಶ ನೀಡಿದೆ ಸರ್ಕಾರ.
ಗಂಡು ಮಕ್ಕಳಿಗೆ ಇನ್ನೂ ಕಟ್ಟುನಿಟ್ಟು: ಹುಡುಗರು ಮತ್ತು ಯುವ ಕರು ಎರಡು ಇಂಚಿಗಿಂತ ಹೆಚ್ಚು ಕೂದಲು ಬೆಳೆಸುವಂತೆಂಯೇ ಇಲ್ಲ. ಉದ್ದ ಕೂದಲು, ಅಸ್ತವ್ಯಸ್ತ ಸ್ಟೈಲ್ ಮಾಡಿದರೆ ಅದನ್ನು ರೆಬೆಲ್ ಹಾಗೂ ಸ್ವೇಚ್ಛೆ ಎಂದು ಪರಿಗಣಿಸಲಾಗುತ್ತದೆ. ವಯಸ್ಸಾದವರಿಗೆ ಮೂರು ಇಂಚು ಉದ್ದ ಬಿಡಬಹುದು. 15 ದಿನಕ್ಕೊಮ್ಮೆ ಟಚ್ ಅಪ್ ಕಡ್ಡಾಯ. ಶಿಸ್ತು, ಕಾನೂನು ಮಾತ್ರವಲ್ಲದೆ ಆರೋಗ್ಯ ಕಾರಣವನ್ನೂ ನೀಡಿ ನಿಯಮ ಪಾಲನೆಗೆ ನಿರ್ದೇಶಿಸಲಾಗಿದೆ. ಈ ಸುದ್ದಿ ಉತ್ತರ ಕೊರಿಯದ ರಾಜ್ಯಮಟ್ಟದ ಟಿವಿವಾಹಿನಿಂಯೊಂದು ಐದು ಕಂತುಗಳಲ್ಲಿ ಈ ಸುದ್ದಿಯನ್ನು ಪ್ರಸಾರ ಮಾಡಿದೆಯೆಂದು ವರ್ಲ್ಡ್.ಮಿಕ್ ವೆಬ್‍ಸೈಟ್ ವರದಿ ಮಾಡಿದೆ.
ಈಗಾಗಲೇ ಸರ್ವಾಧಿಕಾರದಿಂದ ಬೆದರಿ ಬೇಸತ್ತಿರುವ ಉತ್ತರಕೊರಿಯದಲ್ಲಿ ಇಂಥ ವೈಯಕ್ತಿಕ ವಿಚಾರಗಳಿಗೂ ಸರ್ಕಾರ ಹಸ್ತಕ್ಷೇಪ ಮಾಡಿರುವುದು, ಮೊದಲೇ ಫ್ಯಾಷನ್ ಪ್ರಿಯರೆನಿಸಿಕೊಂಡಿರುವ ಕೊರಿಯದ ಯುವಜನತೆ ಹೇಗೆ ಜೀರ್ಣಿಸಿಕೊಳ್ಳುತ್ತದೆಯೇ ನೋಡಬೇಕು.