ಇಸ್ಲಾಮಾಬಾದ್: ಉಗ್ರ ಸಂಘಟನೆಗಳ ಬಗ್ಗೆ ಯಾವುದೇ ವರದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದೆ. ಭಯೋತ್ಪಾದನೆಯನ್ನು ಹತ್ತಿಕ್ಕುವ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ , ಜಮಾತ್ ಉದ್ ದವಾ ಸೇರಿದಂತೆ ಯಾವ ಉಗ್ರ ಸಂಘಟನೆಗಳ ಬಗ್ಗೆಯೂ ವರದಿ ಹಾಗೂ ಜಾಹೀರಾತನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಪಾಕಿಸ್ತಾನ ಸರ್ಕಾರ ತಾಕೀತು ಮಾಡಿದೆ.
ಲಷ್ಕರೆ ಇ ತಯ್ಬಾ, ಜೆಯುಡಿ, ಫಲಾ-ಏ-ಇನ್ಸಾನಿಯತ್(ಎಫ್‌ಐಎಫ್) ಕುರಿತ ವರದಿ ಪ್ರಸಾರ ಮಾಡದಂತೆ ಎಲ್ಲ ಟಿವಿ ಚಾನೆಲ್, ರೇಡಿಯೋ ಸ್ಟೇಷನ್‌ಗಳಿಗೆ ಪಾಕಿಸ್ತಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರಿ ಅಧಿಸೂಚನೆ ಹೊರಡಿಸಿದೆ.
ಇನ್ನು ಮುಂಬಯಿ ದಾಳಿಯ ರೂವಾರಿ ಹಫೀಜ್ ಸೈಯ್ಯದ್ ಹಾಗೂ ಎಫ್‌ಐಎಫ್ ಸಂಘಟನೆಗಳು ಲಷ್ಕರೆ ತಯ್ಬಾದ ಇತರ ಭಾಗಗಳೆಂದು ಪಾಕಿಸ್ತಾನ ಒಪ್ಪಿಕೊಂಡಿದೆ.
ಟಿವಿ ಹಾಗೂ ಎಫ್‌ಎಂ ರೇಡಿಯೋಗಳು ಈ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ್ದಲ್ಲಿ ದಂಡ ಇಲ್ಲವೇ ಪರವಾನಗಿ ರದ್ದು ಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ನಿಷೇಧಿತ 60 ಸಂಘಟನೆಗಳು ಸೇರಿದಂತೆ ಇತರೆ 12 ಭಯೋತ್ಪಾದಕ ಸಂಘಟನೆಗಳ ಮೇಲೆ ಪಾಕ್ ಸರ್ಕಾರ ಹದ್ದಿನ ಕಣ್ಣಿಟ್ಟಿದೆ ಎಂದು ಹೇಳಲಾಗಿದೆ.