ಟರ್ಕಿ: ಬೆಂಕಿಯ ಜೊತೆ ಆಟವಾಡಬೇಡಿ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತೈಯಿಬ್ ಎರ್ಡೋಗನ್ ರಷ್ಯಾಗೆ ಎಚ್ಚರಿಕೆ ನೀಡಿದ್ದಾರೆ.
ರಷ್ಯಾ ವಾಯುಸೇನೆಗೆ ಸೇರಿದ ಜೆಟ್ ವಿಮಾನವನ್ನು ಟರ್ಕಿ ಹೊಡೆದುರುಳಿಸಿದ ದಿನದಿಂದ ರಷ್ಯಾ ಮತ್ತು ಟರ್ಕಿಯ ನಡುವಿನ ಸಂಬಂಧ ಹದಗೆಟ್ಟಿದ್ದು, ಈ ಮಧ್ಯೆ ಬೆಂಕಿಯ ಜೊತೆ ಆಟ ಆಡಬೇಡಿ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತೈಯಿಬ್ ಎರ್ಡೋಗನ್ ರಷ್ಯಾಗೆ ಕಠಿಣ ಸಂದೇಶವನ್ನು ರವಾನಿಸಿದ್ದಾರೆ.
ರಷ್ಯಾದಲ್ಲಿ ಟರ್ಕಿಯ ಮಿಲಿಯನೇರ್ ಉದ್ಯಮಿಯನ್ನು ಬಂಧಿಸಲಾಗಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಟರ್ಕಿ ಈ ಪ್ರತಿಕ್ರಿಯೆ ನೀಡಿದೆ. ಈ ನಡುವೆ ಟರ್ಕಿಯ ಜೊತೆಗಿನ ವೀಸಾ ಮುಕ್ತ ಯಾನ ಒಪ್ಪಂದವನ್ನು ತಾನು ರದ್ದುಗೊಳಿಸಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಅಲ್ಲದೆ, ಶುಕ್ರವಾರ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ರಷ್ಯಾದ ಪ್ರವಾಸೋದ್ಯಮ ಇಲಾಖೆ, ಟರ್ಕಿಯಲ್ಲಿರುವ ಸುಮಾರು 9,000 ರಷ್ಯನ್ನರು ಡಿಸೆಂಬರ್ ಅಂತ್ಯದೊಳಗಾಗಿ ಸ್ವದೇಶಕ್ಕೆ ಹಿಂದಿರುಗಬೇಕೆಂದು ಆಗ್ರಹಿಸಿದೆ.
ರಷ್ಯಾ ಯುದ್ಧ ವಿಮಾನವನ್ನು ಹೊಡೆದುರುಳಿಸಿರುವ ಟರ್ಕಿಯ ವಿರುದ್ಧ ತೀವ್ರ ಸಿಟ್ಟಿಗೆದ್ದಿದ್ದ ರಷ್ಯಾ ಆರ್ಥಿಕ ದಿಗ್ಬಂಧನ ಹೇರುವುದಾಗಿ ಬೆದರಿಕೆ ಹಾಕಿತ್ತು. ಇದನ್ನು ತಳ್ಳಿಹಾಕಿರುವ ಎರ್ಡೋಗನ್ ಅದೊಂದು ಭಾವನಾತ್ಮಕ ಬ್ಲಾಕ್ ಮೇಲ್ ಎಂದು ಹೇಳಿದ್ದಾರೆ. ತನ್ನ ನಾಗರಿಕರಿಗೆ ಕಿರುಕುಳ ನೀಡುವ ಮೂಲಕ ರಷ್ಯಾ ಬೆಂಕಿಯ ಜೊತೆ ಆಟವಾಡುತ್ತಿದೆ. ನಾವು ನಿಜಕ್ಕೂ ರಷ್ಯಾದ ಜೊತೆಗಿನ ಬಾಂಧವ್ಯ ವೃದ್ಧಿಗೆ ಮಹತ್ವ ನೀಡುತ್ತೇವೆ. ನಮ್ಮ ನಡುವಿನ ಸಂಬಂಧದಲ್ಲಿ ಇಂತಹ ಬಿರುಕನ್ನು ತಾನು ಇಷ್ಟಪಡುವುದಿಲ್ಲ ಎಂದು ಇದೇ ವೇಳೆ ಎರ್ಡೋಗನ್ ತಿಳಿಸಿದ್ದಾರೆ.