ನ್ಯೂಯಾರ್ಕ್: ದ್ವಿಪಕ್ಷೀಯ ಮಾತುಕತೆ ನಡೆಯಬೇಕಾದರೆ ಭಯೋತ್ಪಾದನೆಯನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಭಾರತ ಷರತ್ತು ವಿಧಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ಕಾಶ್ಮೀರ ವಿವಾದ ದ್ವಿಪಕ್ಷೀಯ ಮಾತುಕತೆಯ ಪ್ರಮುಖ ಅಜೆಂಡಾ ಅಗಿರಲಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಮಾತುಕತೆಯನ್ನು ಸ್ಥಗಿತಗೊಳಿಸಲು ಭಾರತ ಭಯೋತ್ಪಾದನೆಯ ಕಾರಣ ನೀಡುತ್ತಿದೆ ಎಂದಿರುವ ಪಾಕಿಸ್ತಾನ ತನ್ನ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೆ ಭಾರತವೇ ಕಾರಣ ಎಂದಿದ್ದು ಈ ಬಗ್ಗೆ ವಿಶ್ವಸಂಸ್ಥೆ ಕಾರ್ಯದರ್ಶಿ ಬಾನ್-ಕಿ ಮೂನ್ ಗೆ ಕಡತಗಳನ್ನು ಸಲ್ಲಿಸಿದೆ.
ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿವಾದವನ್ನು ಕೆದಕಿದ್ದ ಪಾಕಿಸ್ತಾನಕ್ಕೆ ಭಯೋತ್ಪಾದನೆಯನ್ನು ನಿಲ್ಲಿಸಿ ದ್ವಿಪಕ್ಷೀಯ ಮಾತುಕತೆಗೆ ಬರುವಂತೆ ಭಾರತ ಷರತ್ತು ವಿಧಿಸಿತ್ತು. ಭಾರತದ ಷರತ್ತನ್ನು ತಿರಸ್ಕರಿಸಿರುವ ಪಾಕಿಸ್ತಾನ, ದ್ವಿಪಕ್ಷೀಯ ಮಾತುಕತೆ ನಡೆಯುವುದನ್ನು ತಡೆಗಟ್ಟಲೆಂದೇ ಭಾರತ ಭಯೋತ್ಪಾದನೆಯ ಕಾರಣ ನೀಡುತ್ತಿದೆ ಎಂದು ಹೇಳಿದೆ.
ಭಾರತ ನೀಡುತ್ತಿರುವ ಕಾರಣ ಕೇವಲ ದ್ವಿಪಕ್ಷೀಯ ಮಾತುಕತೆ ಮೇಲಷ್ಟೇ ಪರಿಣಾಮ ಬೀರದೆ, ಉಭಯ ರಾಷ್ಟ್ರಗಳ ಒಟ್ಟಾರೆ ವಾತಾವರಣವೇ ಕಲುಷಿತಗೊಂಡಿದೆ ಎಂದು ಆರೋಪಿಸಿದೆ.