ಬೈರುತ್: ಸಿರಿಯಾದ ಮಾರುಕಟ್ಟೆಯೊಂದರ ಮೇಲೆ ಸಿರಿಯಾ ಸರ್ಕಾರದ ವಾಯುಪಡೆ ವಾಯುದಾಳಿ ನಡೆಸಿದ್ದು, ಪರಿಣಾಮ 40 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಸಿರಿಯಾ ಸರ್ಕಾರಿ ಒಡೆತದನ ಯುದ್ಧ ವಿಮಾನವೊಂದು ಡಮಸ್ಕಸ್ ಬಳಿಯ ಡೌಮಾದಲ್ಲಿರುವ ಮಾರುಕಟ್ಟೆಯೊಂದರ ಮೇಲೆ ಬಾಂಬ್ ಗಳ ಸುರಿಮಳೆಯನ್ನು ಸುರಿಸಿದೆ. ಇದರ ಪರಿಣಾಮ 40 ಮಂದಿ ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ಡೆಲ್ ರೆಹಮಾನ್ ಅವರು, ಇಂದು ಬೆಳಗ್ಗಿನಿಂದಲೇ ಡೌಮಾ ಪ್ರದೇಶದಲ್ಲಿ ನಿರಂತರವಾಗಿ ಬಾಂಬ್ ದಾಳಿ ನಡೆಯುತ್ತಿದ್ದು, ಪ್ರತೀ ಹತ್ತು ನಿಮಿಷಗಳಿಗೊಮ್ಮೆ ಬಾಂಬ್ ಸುರಿಯಲಾಗುತ್ತಿದೆ. ಸ್ಥಳದಲ್ಲಿ ಈಗಲೂ ಬಾಂಬ್ ದಾಳಿ ನಡೆಯುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.