ನವದೆಹಲಿ: ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರ ಸಂಘಟನೆ ಸೇರಲು ಹೊರಟಿದ್ದ ಹನ್ನೊಂದು ಮಂದಿ ಭಾರತೀಯರನ್ನು ಯುಎಇ ವಶಕ್ಕೆ ತೆಗೆದುಕೊಂಡಿದೆ. ಆಗಸ್ಟ್ ತಿಂಗಳಾರಂಭದಿಂದಲೇ ಈ 11 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲಾಗುತ್ತಿದೆ.
ಉಗ್ರ ಸಂಘಟನೆಗೆ ನೇಮಕಾತಿ, ಹಣಕಾಸು ಸೌಲಭ್ಯ ಹಾಗೂ ಮತ್ತಿತರ ಸೇವೆಗಳನ್ನು ಒದಗಿಸುತ್ತಿ ದ್ದುದಕ್ಕಾಗಿ ಹಲವು ದಿನಗಳ ಕಾಲ ಯುಎಇ ಪೊಲೀಸರು ಇವರ ಮೇಲೆ ಕಣ್ಣಿಟ್ಟಿದ್ದರು. ಇವರು ಐಎಸ್ ಸೇರಲು ಯತ್ನಿಸುತ್ತಿರುವುದು ಸ್ಪಷ್ಟವಾಗುತ್ತಿದ್ದಂತೆ ವಶಕ್ಕೆ ತೆಗೆದುಕೊಂಡಿದ್ದಾರೆ.
ಕೆಲದಿನಗಳ ಹಿಂದಷ್ಟೇ ಐಎಸ್ ಸೇರಲು ಹೊರಟಿದ್ದ ಕೇರಳದ ಯುವಕರಿಬ್ಬರನ್ನು ಯುಎಇ ಗಡೀಪಾರು ಮಾಡಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಮೂಲಗಳ ಪ್ರಕಾರ ವಶಕ್ಕೆ ತೆಗೆದುಕೊಳ್ಳಲಾದ 11 ಮಂದಿಯಲ್ಲಿ ಎಂಟು ಮಂದಿ ಅಬು ದುಬೈನಲ್ಲಿ ನೆಲೆಸಿದ್ದರೆ, ಉಳಿದ ಐದು ಮಂದಿ ದುಬೈನಲ್ಲಿ ಉಳಿದಿದ್ದರು.
ಗುಪ್ತಚರ ಮೂಲಗಳ ಪ್ರಕಾರ ಅಬು ದುಬೈಮತ್ತು ದುಬೈನಲ್ಲಿ ನೆಲೆಸಿದ್ದ ಭಾರತೀಯರೇ ಬಹುಸಂಖ್ಯಾತರಿದ್ದ ಎರಡು ಗುಂಪುಗಳ ಮೇಲೆ ಕಣ್ಣಿಡಲಾಗಿತ್ತು. ಈ ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ಐಎಸ್ ಕುರಿತು ಮಾಹಿತಿ ವಿನಿಮಯ ಮಾಡುತ್ತಿತ್ತು. ಜತೆಗೆ, ಆನ್‍ಲೈನ್ ಮೂಲಕ ಐಎಸ್ ಮುಖಂಡರನ್ನು ಸಂಪರ್ಕಿಸಲೂ ಯತ್ನಿಸುತ್ತಿತ್ತು.
ಗಡೀಪಾರುಗೊಂಡ ಇಬ್ಬರು ಸೇರಿ ಎಲ್ಲ 13 ಮಂದಿ ಒಬ್ಬೊಬ್ಬರಾಗಿ ಟರ್ಕಿ ಅಥವಾ ಯೆಮನ್ ಮೂಲಕ ಸಿರಿಯಾಗೆ ಪ್ರಯಾಣಿಸುವ ಯೋಜನೆ ಹಾಕಿದ್ದರು. ಈಗಾಗಲೇ 17 ಮಂದಿ ಭಾರತೀಯರುಐಎಸ್ ಸೇರಿದ್ದಾರೆ ಎಂದು ಹೇಳಲಾಗಿದೆ. ಸದ್ಯ ವಶಕ್ಕೆ ತೆಗೆದುಕೊಳ್ಳಲಾದ 11 ಮಂದಿ ವಿರುದ್ಧ ಈವರೆಗೆ ಯುಎಇ ಯಾವುದೇ ಪ್ರಕರಣ ದಾಖಲಿಸಿಲ್ಲ. ಹಾಗಾಗಿ ಯುಎಇ ತೆಗೆದುಕೊಳ್ಳಲಿರುವ ಕ್ರಮಕ್ಕಾಗಿ ಕಾದು ನೋಡಲು ನಿರ್ಧರಿಸಿದೆ. ಜತೆಗೆ, ಅವರ ಗಡೀಪಾರಿಗಾಗಿ ಎದುರು ನೋಡುತ್ತಿದೆ.