ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಜೈಲಿನ ಮೇಲೆ ತಾಲಿಬಾನ್ ಉಗ್ರರ ದಾಳಿ: 4 ಅಧಿಕಾರಿಗಳ ಹತ್ಯೆ, ನೂರಾರು ಖೈದಿಗಳ ಪರಾರಿ

ಆಫ್ಘಾನಿಸ್ತಾನದ ಪ್ರಮುಖ ಜೈಲಿನ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದು, ನಾಲ್ಕು ಮಂದಿ ಜೈಲು ಅಧಿಕಾರಿಗಳು ಧಾರುಣವಾಗಿ ಕೊಂದು ಹಾಕಿದ್ದಾರೆ ಎಂದು ತಿಳಿದುಬಂದಿದೆ...

ತಾಲಿಬಾನ್ ಉಗ್ರ ಸಂಘಟನೆ ದಾಳಿ ನಡೆಸಿದ ಘಜನಿ ಬಂಧೀಖಾನೆ (ಚಿತ್ರಕೃಪೆ: ಎಎಫ್ ಪಿ)
Srinivasa Murthy VN
Updated On : 14 Sept 2015, 6:43 am

ಕಾಬುಲ್: ಆಫ್ಘಾನಿಸ್ತಾನದ ಪ್ರಮುಖ ಜೈಲಿನ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದು, ನಾಲ್ಕು ಮಂದಿ ಜೈಲು ಅಧಿಕಾರಿಗಳು ಧಾರುಣವಾಗಿ ಕೊಂದು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಆಫ್ಘಾನಿಸ್ತಾನದ ಘಜನಿಯಲ್ಲಿರುವ ಜೈಲಿನ ಮೇಲೆ ಭಾನುವಾರ ತಡರಾತ್ರಿ ಸುಮಾರು 6 ಮಂದಿ ತಾಲಿಬಾನ್ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಉಗ್ರರ ದಿಢೀರ್  ದಾಳಿಯಿಂದಾಗಿ ಗಾಬರಿಗೊಂಡ ಜೈಲು ಅಧಿಕಾರಿಗಳು ಪ್ರತಿ ದಾಳಿ ನಡೆಸುವಷ್ಟರಲ್ಲಿಯೇ ಬಂಧೀಖಾನೆಯ ಒಳಗೇ ನುಗ್ಗಿದ ಉಗ್ರರು ನಾಲ್ಕು ಮಂದಿ ಪೊಲೀಸ್‌ ಅಧಿಕಾರಿಗಳನ್ನು ಕೊಂದು  ಹಾಕಿದ್ದಾರೆ. ಅಲ್ಲದೆ ಜೈಲಿನೊಳಗಿದ್ದ ಸುಮಾರು 350ಕ್ಕೂ ಅಧಿಕ ಮಂದಿ ಖೈದಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಜೈಲಿನಿಂದ ಪರಾರಿಯಾದ ಖೈದಿಗಳ ಪೈಕಿ ಸುಮಾರು 148 ಮಂದಿ ಖೈದಿಗಳು ಇದೇ ತಾಲಿಬಾನ್ ಸಂಘಟನೆಗೆ ಸೇರಿದವರೆಂದು ತಿಳಿದುಬಂದಿದೆ. ಭಾನುವಾರ ತಡರಾತ್ರಿ ಸುಮಾರು  2.30ರ ಹೊತ್ತಿಗೆ ಸೇನಾ ಸಮವಸ್ತ್ರ ಧರಿಸಿಕೊಂಡಿದ್ದ ಆರು ಮಂದಿ ಭಾರೀ ಶಸ್ತ್ರ ಸಜ್ಜಿತ ಉಗ್ರರು ಬಂಧೀಖಾನೆಯ ಗೇಟ್ ಗೆ ಕಾರ್‌ ಬಾಂಬ್‌ ಅಳವಡಿಸಿ ಸ್ಫೋಟಿಸಿದ್ದಾರೆ. ಬಳಿಕ ಆರ್‌ಪಿಜಿಯತ್ತ  ಗುಂಡೆಸೆದು ಅನಂತರ ಜೈಲಿಗೆ ದಾಳಿ ಇಟ್ಟರು ಎಂದು ಸ್ಥಳೀಯ ಭದ್ರತಾ ಅಧಿಕಾರಿ ಮೊಹಮ್ಮದ್‌ ಅಲಿ ಅಹ್ಮದಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇನ್ನು ಘಟನೆಯಲ್ಲಿ ಇತರೆ 7 ಮಂದಿ ಜೈಲು ಅಧಿಕಾರಿಗಳು ಸೇರಿದಂತೆ ಒಟ್ಟು 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಘಜನಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ  ನೀಡಲಾಗುತ್ತಿದೆ. ಈ ಪೈಕಿ 10 ಮಂದಿ ಭದ್ರತಾ ಅಧಿಕಾರಿಗಳು ಮತ್ತು ನಾಲ್ವರು ಖೈದಿಗಳು ಸೇರಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರ ಸಂಘಟನೆ  ಹೊತ್ತುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement