ಸಿಯೋಲ್: ಅಮೆರಿಕ ಸೇರಿದಂತೆ ವಿಶ್ವ ಸಮುದಾಯದ ವ್ಯಾಪಕ ವಿರೋಧದ ನಡುವೆಯೇ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೇತೃತ್ವದ ಉತ್ತರ ಕೊರಿಯಾ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಕ್ಷಿಪಣಿಯ ಶಕ್ತಿಶಾಲಿ ಎಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿಕೊಂಡಿದೆ.
ಉತ್ತರ ಕೊರಿಯಾ ಸರ್ಕಾರದ ಅಧಿಕೃತ ವಾಹಿನಿಯಾದ ಕೆಸಿಎನ್ಎ ಸುದ್ದಿ ಸಂಸ್ಥೆ ತಿಳಿಸಿರುವಂತೆ, ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರ ನಿರ್ದೇಶನದಂತೆ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಪರಮಾಣು ಕ್ಷಿಪಣಿಯ ಎಂಜಿನ್ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ಪ್ರಮುಖವಾಗಿ ತನ್ನ ಶತ್ರು ರಾಷ್ಟ್ರ ಅಮೇರಿಕ ಮತ್ತು ದಕ್ಷಿಣ ಕೊರಿಯಾ ದೇಶಗಳನ್ನು ದೃಷ್ಟಿಯಸ್ಸಿಟ್ಟುಕೊಂಡು ಉತ್ತರ ಕೊರಿಯಾ ಈ ಖಂಡಾಂತರ ಕ್ಷಿಪಣಿ ಎಂಜಿನ್ ಅನ್ನು ಅಬಿವೃದ್ಧಿ ಪಡಿಸಿತ್ತು. ಇಂದು ಅದರ ಪ್ರಯೋಗಾತ್ಮಕ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.
ಉತ್ತರ ಕೊರಿಯಾದ ಪ್ಯೋಗ್ಯಾಂಗ್ ಬಳಿ ಇರುವ ಉಡಾವಣಾ ಕೇಂದ್ರದಿಂದ ಕ್ಷಿಪಣಿಯ ಎಂಜಿನ್ ಅನ್ನು ಹಾರಿಸಲಾಗಿದ್ದು, ಕ್ಷಿಪಣಿ ನಿಗದಿತ ಸಮಯದಲ್ಲಿ ನಿಖರವಾರದ ಗುರಿಯನ್ನು ತಲುಪುವ ಮೂಲಕ ಪರೀಕ್ಷೆ ಯಶಸ್ವಿಯಾಗಿದೆ. ಈಗ್ಗೆ ಕೆಲತಿಂಗಳ ಹಿಂದಷ್ಟೇ ವಿಶ್ವಸಂಸ್ಥೆಯ ವಿರೋಧದ ನಡುವೆಯೇ ಅಧ್ಯಕ್ಷ ಕಿಮ್ ಜಾಂಗ್ ಉನ್ ಮಧ್ಯಮ ದೂರಾಗಮಿ ಅಣ್ವಸ್ತ್ರ ಕ್ಷಿಪಣಿಯ ಪರೀಕ್ಷೆ ನಡೆಸಿ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಘಟನೆಯ ಬೆನ್ನಲ್ಲೇ ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷಿಸುವಂತಿಲ್ಲ ಎಂದು ವಿಶ್ವಸಂಸ್ಥೆ ನಿಷೇಧ ಹೇರಿತ್ತು. ಅದರ ಹೊರತಾಗಿಯೂ ಇದೀಗ ಮತ್ತೆ ಉತ್ತರ ಕೊರಿಯಾ ಅಣ್ವಸ್ತ್ರ ಕ್ಷಿಪಣಿಯ ಎಂಜಿನ್ ಪರೀಕ್ಷೆ ನಡೆಸಿದೆ.