ಹಾಂಕ್ ಕಾಂಗ್: ಪ್ರಧಾನಿ ನರೇಂದ್ರ ಮೋದಿ ಅವರ ಮೇಣದ ಪ್ರತಿಮೆಗಳು ಲಂಡನ್, ಹಾಂಕ್ ಕಾಂಗ್, ಸಿಂಗಪೂರ್ ಹಾಗೂ ಬ್ಯಾಂಗ್ಕಾಕ್ ನಲ್ಲಿರುವ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ನಲ್ಲಿ ಸೇರ್ಪಡೆಗೊಂಡಿವೆ.
ಮೇಣದ ಪ್ರತಿಮೆ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ನ ಶಾಖೆಗಳಲ್ಲಿ ಅನಾವರಣಗೊಳ್ಳುವುದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಖುದ್ದು ತಮ್ಮ ಪ್ರತಿಮೆಯನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು. ಮೇಣದ ಪ್ರತಿಮೆಗಾಗಿ ಕಲಾವಿದರಿಗೆ ಅಳತೆ ನೀಡಿದ್ದ ಪ್ರಧಾನಿ, ಪ್ರತಿಮೆ ನಿರ್ಮಾಣದ ಬಳಿಕ ಅತೀವ ಸಂತಸ ವ್ಯಕ್ತಪಡಿಸಿದ್ದು, ಬ್ರಹ್ಮ ಮಾಡುತ್ತಿರುವ ಕೆಲಸವನ್ನು ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ನ ಕಲಾವಿದರೂ ಮಾಡುತ್ತಿದ್ದಾರೆ ಎಂದು ಮೋದಿ ಕಲಾವಿದರ ಕೈಚಳಕವನ್ನು ಬಣ್ಣಿಸಿದ್ದಾರೆ. ಇಂದು ನನ್ನ ಮೇಣದ ಪ್ರತಿಮೆಯನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು ಎಂದು ಪ್ರಧಾನಿ ಮೋದಿ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರ ಮೇಣದ ಪ್ರತಿಮೆಯೊಂದಿಗೆ ಪ್ರಧಾನಿ ಮೋದಿ ಅವರ ಮೇಣದ ಪ್ರತಿಮೆಯನ್ನು ಇರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಣದ ಪ್ರತಿಮೆಯನ್ನು ಬರಮಾಡಿಕೊಳ್ಳಲು ಉತ್ಸುಕರಾಗಿದ್ದೇವೆ. ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗುವುದಕ್ಕೂ ಮುನ್ನವೇ ಮೋದಿ ಅವರ ಮೇಣದ ಪ್ರತಿಮೆಯನ್ನು ವೀಕ್ಷಿಸುವ ಅವಕಾಶ ಸಿಕ್ಕಿತ್ತು ಎಂದು ಹಾಂಕ್ ಕಾಂಗ್ ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಜೆನ್ನಿ ಯು ತಿಳಿಸಿದ್ದಾರೆ.
ಖುರ್ತಾ ಧರಿಸಿ, ನಮಸ್ಕಾರ ಮಾಡುತ್ತಿರುವ ಭಂಗಿಯಲ್ಲಿ ಪ್ರಧಾನಿ ಮೋದಿ ಅವರ ಮೇಣದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಮೋದಿ ಅವರ ಮೇಣದ ಪ್ರತಿಮೆ ನಿರ್ಮಾಣಕ್ಕೆ 1 .8 ಮಿಲಿಯನ್ ಹಾಂಕ್ ಕಾಂಗ್ ಡಾಲರ್ ಖರ್ಚಾಗಿದೆ.