ಇಸ್ಲಾಮಾಬಾದ್: ಭಾರತ ಸಲ್ಲಿಸಿದ್ದ ದಾವೂದ್ನ ಪಾಕಿಸ್ತಾನದ 6 ವಿಳಾಸಗಳು ಸರಿ ಎಂದು ವಿಶ್ವಸಂಸ್ಥೆ ಹೇಳಿದ ಬೆನ್ನಲ್ಲೇ, ಪಾಕಿಸ್ತಾನ ತನ್ನ ನೆಲದಲ್ಲಿ ದಾವೂದ್ ಇಬ್ರಾಹಿಂ ಇರುವುದನ್ನು ನಿರಾಕರಿಸಿದೆ.
ವಿಶ್ವಸಂಸ್ಥೆಯ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಪಾಕಿಸ್ತಾನ, ವಿಶ್ವಸಂಸ್ಥೆ ವಿರುದ್ಧವೇ ಆರೋಪಿಸಿದ್ದು, ಪಾಕಿಸ್ತಾನಕ್ಕೆ ಧಕ್ಕೆ ಉಂಟುಮಾಡುವ ಭಾರತದ ಉದ್ದೇಶದಿಂದ ಪ್ರೇರಣೆ ಪಡೆದಿದೆ ಎಂದು ಆರೋಪಿಸಿದೆ. ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ನಡೆಸುತ್ತಿರುವ ಹೋರಾಟವನ್ನು ಕುಗ್ಗಿಸಲು ಭಾರತದ ಉದ್ದೇಶದೊಂದಿಗೆ ವಿಶ್ವಸಂಸ್ಥೆ ಸಹ ಭಾಗಿಯಾಗಿದೆ ಎಂದು ಪಾಕ್ ಆರೋಪಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿಯು ನಡೆಸಿದ ಪರಿಶೀಲನೆಯಲ್ಲಿ ಭಾರತ ಸಲ್ಲಿಸಿದ್ದ 9 ವಿಳಾಸಗಳ ಪೈಕಿ 3 ವಿಳಾಸಗಳು ತಪ್ಪು ಎಂದು ತಿಳಿದು ಬಂದಿದೆ. ಅದರಲ್ಲಿ ಒಂದು ವಿಳಾಸ ವಿಶ್ವಸಂಸ್ಥೆಯ ಪಾಕಿಸ್ತಾನದ ರಾಯಭಾರಿ ಮಲೇಹಾ ಲೋಧಿ ಅವರಿಗೆ ಸೇರಿದ್ದು ಎಂದು ಸಮಿತಿ ತಿಳಿಸಿದೆ. ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ ಎಂದು ಆರೋಪಿಸಿರುವ ಭಾರತ ಆ ಸಂಬಂಧ ವಿವರವಾದ ಕಡತವನ್ನು ಸಿದ್ಧಪಡಿಸಿ ಕಳೆದ ವರ್ಷ ಆಗಸ್ಟ್ನಲ್ಲಿ ವಿಶ್ವಸಂಸ್ಥೆಗೆ ಸಲ್ಲಿಸಿತ್ತು.