ಇಸ್ಲಾಮಾಬಾದ್: ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತವನ್ನು ಮತ್ತೆ ಕೆಣಕಿರುವ ಪಾಕಿಸ್ತಾನ, ಕಣಿವೆ ರಾಜ್ಯದ ವಿಚಾರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತುವ ನಿಟ್ಟಿನಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ 22 ಸಂಸದರ ನಿಯೋಗವೊಂದನ್ನು ರಚಿಸಿದ್ದಾರೆ.
ಕಾಶ್ಮೀರದ ಕುರಿತ ಹೋರಾಟಕ್ಕಾಗಿ ನಾನು 22 ಸಂಸದರ ವಿಶೇಷ ತಂಡವನ್ನು ರಚಿಸಿದ್ದು, ಈ ಸಂಸದರನ್ನು ಪ್ರಪಂಚದ ವಿವಿಧ ಭಾಗಗಳಿಗೆ ಕಳುಹಿಸಲು ನಿರ್ಧರಿಸಿದ್ದೇನೆ. ಈ ವಿಶೇಷ ಪ್ರತಿನಿಧಿಗಳು ಪಾಕಿಸ್ತಾನ ಜನರ ಜೀವಾಳವಾಗಿದ್ದಾರೆ. ಇವರಿಗೆ ಸರ್ಕಾರ ಹಾಗೂ ಜನರ ಬೆಂಬಲ ಇದೆ. ಆ ಕಾರಣಕ್ಕಾಗಿ ನಾವು ಕಾಶ್ಮೀರ ವಿಚಾರವಾಗಿ ಹೋರಾಟ ಮುಂದುವರಿಸಲಿದ್ದೇವೆ ಎಂದು ನವಾಜ್ ಷರೀಫ್ ಹೇಳಿದ್ದಾರೆ.
ಕಾಶ್ಮೀರಿ ಜನರಿಗೆ ಸ್ವಯಂ ನಿರ್ಣಯ ತೆಗೆದುಕೊಳ್ಳುವ ಅವಕಾಶ ನೀಡುವ ವಿಶ್ವಸಂಸ್ಥೆಯ ಬಹುದಿನಗಳ ಭರವಸೆಗೆ ನಾವು ಬದ್ಧರಾಗಿದ್ದು, ಇದನ್ನು ಭಾರತಕ್ಕೆ ಸ್ಪಷ್ಟಪಡಿಸಬೇಕು ಎಂದು ಪಾಕ್ ಪ್ರಧಾನಿ ಆಗ್ರಹಿಸಿದ್ದಾರೆ.
ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ಪ್ರಚೋದನೆ ನೀಡೋದನ್ನು ನಿಲ್ಲಿಸಬೇಕು ಹಾಗೂ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಬಾರದು ಎಂದು ಪಾಕಿಸ್ತಾನದ ಮೇಲೆ ಭಾರತ ಒತ್ತಡ ಹಾಕುತ್ತಿರುವ ನಡುವೆಯೇ ಕಾಶ್ಮೀರ ಕುರಿತು ಪಾಕ್ ಮತ್ತೆ ಕ್ಯಾತೆ ತೆಗೆದಿದೆ.
ಕಾಶ್ಮೀರ ವಿಚಾರ ಕುರಿತು ಮಾತುಕತೆಗೆ ಆಹ್ವಾನಿಸಿದ್ದ ಪಾಕಿಸ್ತಾನದ ಆಹ್ವಾನವನ್ನು ಭಾರತ ತಿರಸ್ಕರಿಸಿದ ಬೆನ್ನಲ್ಲೇ ನವಾಜ್ ಷರೀಫ್ ಈ ಹೊಸ ತಂತ್ರಕ್ಕೆ ಮೊರೆಹೋಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics