ಚೀನಾ ಜೊತೆ ಹೇಗೆ ವ್ಯವಹರಿಸಬೇಕೆಂಬುದನ್ನು ಟ್ರಂಪ್ ಭಾರತದಿಂದ ಕಲಿಯಲಿ: ವಿದೇಶಾಂಗ ನೀತಿ ನಿಯತಕಾಲಿಕೆ
ಡೊನಾಲ್ಡ್ ಟ್ರಂಪ್ ಅವರು ಚೀನಾ ಜೊತೆ ಹೇಗೆ ವ್ಯವಹರಿಸಬೇಕೆಂಬುದನ್ನು ಭಾರತದಿಂದ ಕಲಿಯಬಹುದು ಎಂದು ಅಮೆರಿಕದ ಪ್ರಸಿದ್ಧ ವಿದೇಶಾಂಗ ನೀತಿ ನಿಯತಕಾಲಿಕೆಯೊಂದು ಸಲಹೆ ನೀಡಿದೆ.
ನವದೆಹಲಿ: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಡೊನಾಲ್ಡ್ ಟ್ರಂಪ್ ಅವರು ಚೀನಾ ಜೊತೆ ಹೇಗೆ ವ್ಯವಹರಿಸಬೇಕೆಂಬುದನ್ನು ಭಾರತದಿಂದ ಕಲಿಯಬಹುದು ಎಂದು ಅಮೆರಿಕದ ಪ್ರಸಿದ್ಧ ವಿದೇಶಾಂಗ ನೀತಿ ನಿಯತಕಾಲಿಕೆಯೊಂದು ಸಲಹೆ ನೀಡಿದೆ.
ತೈವಾನ್ ಅಧ್ಯಕ್ಷರೊಂದಿಗೆ ಡೊನಾಲ್ಡ್ ಟ್ರಂಪ್ ಮಾತನಾಡಿದ ನಂತರ ಚೀನಾ ಎಚ್ಚರಿಕೆ ನೀಡಿದ್ದು ಹಾಗೂ ಅಮೆರಿಕದ ನಿಯೋಜಿತ ಅಧ್ಯಕ್ಷ ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದ್ದಕ್ಕೆ ಆಡಳಿತ ವರ್ಗ ಕಂಗಾಲಾಗಿರುವುದು ಇಡೀ ಜಗತ್ತಿಗೇ ಗೊತ್ತಿದೆ. ಆದರೆ ಏಷ್ಯಾದ ಒಂದು ರಾಷ್ಟ್ರ (ಭಾರತ) ಒಂದೇ ಚೀನಾ ನೀತಿಗೆ ಮನ್ನಣೆ ನೀಡದೇ ತಿರುಗೇಟು ನೀಡುವುದರ ಜೊತೆಗೆ ಸಂದರ್ಭಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದು ಮಾತ್ರ ಮರೆತು ಹೋಗಿರುವ ಸಂಗತಿಯಾಗಿದೆ ಎಂದು ಭಾರತವನ್ನು ಬಣ್ಣಿಸಿದೆ.
ಒಂದೇ ಚೀನಾ ನೀತಿಗೆ ಹೆಚ್ಚು ಮನ್ನಣೆ ನೀಡದೇ ಸಂದರ್ಭಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡ ರಾಷ್ಟ್ರ ಭಾರತವಾಗಿದ್ದು, ಚೀನಾ ಜೊತೆ ವ್ಯವಹರಿಸುವ ಬಗ್ಗೆ ಡೊನಾಲ್ಡ್ ಟ್ರಂಪ್ ಭಾರತದಿಂದ, ಭಾರತದ ವಿದೇಶಾಂಗ ನೀತಿಯಿಂದ ಕಲಿಯುವುದು ಇದೆ ಎಂದು ಅಮೆರಿಕದ ಪ್ರಸಿದ್ಧ ನಿಯತಕಾಲಿಕೆ ವರದಿ ಮಾಡಿದೆ.
ತೈವಾನ್, ಟಿಬೆಟ್ ಗಳಲ್ಲಿನ ದಲೈ ಲಾಮಾ ಅವರಂತಹ ಜಾಗತಿಕ ಶಕ್ತಿಗಳು ಕುಗ್ಗುತ್ತಿದ್ದರೆ ಒಂದೇ ಚೀನಾ ನೀತಿಗೆ ಕಳೆದ 6 ವರ್ಷಗಳಿಂದ ಬಹಿರಂಗವಾಗಿ ಸವಾಲು ಹಾಕಿರುವ ಜಗತ್ತಿನ ಏಕೈಕ ರಾಷ್ಟ್ರ ಭಾರತವಾಗಿ ಎಂದು ನಿಯತಕಾಲಿಕೆ ಪ್ರಕಟಿಸಿರುವ ಲೇಖನದಲ್ಲಿ ಹೇಳಲಾಗಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಚೀನಾದೊಂದಿಗೆ ಹೇಗೆ ವ್ಯವಹರಿಸಿದ್ದರು
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಅವರು ಚೀನಾದೊಂದಿಗೆ ವ್ಯವಹರಿಸಿದ ರೀತಿಯನ್ನೂ ವಿಶ್ಲೇಷಿಸಿರುವ ನಿಯತಕಾಲಿಕೆ, ಮಿಲಿಟರಿ ಸಂಬಂಧ ಸೇರಿದಂತೆ ಚೀನಾಗೆ ಸಂಬಂಧಿಸಿದ ಹಲವಾರು ವಿಷಯಗಳಲ್ಲಿ ಕಠಿಣ ನಿರ್ಧಾರ ಕೈಗೊಂಡಿದ್ದರು. ಪಾಕಿಸ್ತಾನದ ಸಾರ್ವಕಾಲಿಕ ಪರಮಾಪ್ತ ರಾಷ್ಟ್ರವಾದ ಚೀನಾ ಕಾಶ್ಮೀರದಲ್ಲಿ ಭಾರತದ ವಿರುದ್ಧದ ನಿಲುವನ್ನು ಹೊಂದಿತ್ತು. ಪರಿಣಾಮವಾಗಿ ಕಾಶ್ಮೀರದಲ್ಲಿ ಭಾರತೀಯ ಸೇನೆಯ ಮಿಲಿಟರಿ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಜನರಲ್ ಬಿಎಸ್ ಜಸ್ವಾಲ್ ಅವರಿಗೆ ವೀಸಾ ನೀಡಲು ನಿರಾಕರಿಸಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರ ಚೀನಾ ವಿರುದ್ಧ ಕಠಿಣ ನಿಲುವು ಹೊಂದಿತ್ತು.
ಪ್ರಧಾನಿ ನರೇಂದ್ರ ಮೋದಿ ಸಹ ಚೀನಾ ವಿಷಯದಲ್ಲಿ ಕಠಿಣ ನಿಲುವು ಹೊಂದಿದ್ದು ಮೋದಿ ಸರ್ಕಾರದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ "ಭಾರತ ಒಂದೇ ಚೀನಾ ನೀತಿಯನ್ನು ಒಪ್ಪಬೇಕಾದರೆ ಚೀನಾ ಒಂದೇ ಭಾರತ ನೀತಿಯನ್ನೂ ಒಪ್ಪಬೇಕೆಂಬ ಷರತ್ತು ವಿಧಿಸಿದ್ದರು, ಭಾರತದ ಕಠಿಣ ನಿಲುವಿನಿಂದಾಗಿ ಮೃದು ಧೋರಣೆ ಅನುಸರಿಸುವುದು ಚೀನಾಗೆ ಅನಿವಾರ್ಯವಾಯಿತು. ಚೀನಾದೊಂದಿಗೆ ವ್ಯವಹರಿಸುವಾಗ ಟ್ರಂಪ್ ಭಾರತದಿಂದ ಸಾಕಷ್ಟು ಕಲಿಯಬೇಕಾಗಿದೆ ಎಂದು ನಿಯತಕಾಲಿಕೆ ಸಲಹೆ ನೀಡಿದೆ.