ವಿದೇಶ

ಲಿಬಿಯಾ ವಿಮಾನ ಹೈಜಾಕ್ ಹೈಡ್ರಾಮಾ ಅಂತ್ಯ, ಎಲ್ಲಾ 118 ಪ್ರಯಾಣಿಕರ ಬಿಡುಗಡೆ

Lingaraj Badiger
ವಲ್ಲೇಟ್ಟಾ: 118 ಜನರಿದ್ದ ಲಿಬಿಯಾದ ವಾಣಿಜ್ಯ ವಿಮಾನವೊಂದನ್ನು ಶುಕ್ರವಾರ ಹೈಜಾಕ್ ಮಾಡಲಾಗಿದ್ದು, ವಿಮಾನ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಹೈಜಾಕ್ ಹೈಡ್ರಾಮಾ ಸುಖಕರವಾಗಿ ಅಂತ್ಯಗೊಂಡಿದ್ದು, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ.
ಲಿಬಿಯಾದ ದೇಶಿಯ ಆಫ್ರಿಖಿಯಾ ಏರ್ ವೇಸ್ ನಲ್ಲಿ 118 ಮಂದಿ ಪ್ರಯಾಣಿಕರಿದ್ದರು. ವಿಮಾನದಲ್ಲಿದ್ದ ಇಬ್ಬರು ದುಷ್ಕರ್ಮಿಗಳು ವಿಮಾನವನ್ನು ಸ್ಫೋಟಿಸುವ ಬೆದರಿಕೆಯೊಡ್ಡಿ ಹೈಜಾಕ್ ಮಾಡಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿತ್ತು.
ಸೆಬಾದಿಂದ ಟ್ರಿಪೋಲಿಯಾಗೆ ತೆರಳುತ್ತಿದ್ದ ವಿಮಾನವನ್ನು ಬೆದರಿಸಿ ಮಾಲ್ಟಾಗೆ ಮಾರ್ಗ ಬದಲಿಸಿ ವಿಮಾನವನ್ನು ಲ್ಯಾಂಡ್ ಮಾಡಿಸಿರುವುದಾಗಿ ವರದಿ ಹೇಳಿದೆ. ಲಿಬಿಯಾ ಕರಾವಳಿ ಪ್ರದೇಶದಿಂದ 500 ಕಿಮೀ ದೂರದಲ್ಲಿ ಮಾಲ್ಟಾ ದ್ವೀಪವಿದೆ.
ಮಾಲ್ಟಾದ ಸ್ಥಳೀಯ ಕಾಲಮಾನ ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಮಾನ ಭೂಸ್ಪರ್ಶ ಮಾಡಿದೆ. ಭದ್ರತಾ ಪಡೆಗಳು ವಿಮಾನವನ್ನು ಸುತ್ತುವರೆದಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಲ್ಟಾದ ಮಾಧ್ಯಮ ವರದಿ ಮಾಡಿತ್ತು.

ಇನ್ನು ವಿಮಾನ ಅಪಹರಣವಾಗಿರುವ ಕುರಿತು ಮಾಲ್ಟಾದ ಪ್ರಧಾನಿ ಜೋಸೆಫ್ ಮಸ್ಕತ್ ಟ್ವೀಟ್ ಮಾಡಿದ್ದು, ಅಪಹರಣದ ವರದಿಯನ್ನು ಖಚಿತಪಡಿಸಿದ್ದಾರೆ. ಅಲ್ಲದೆ ಎಲ್ಲಾ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
SCROLL FOR NEXT