ಬೀಜಿಂಗ್: ತೈವಾನ್ ವಿವಾದ ಮತ್ತು ದಕ್ಷಿಣ ಚೀನಾ ಸಮುದ್ರ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧ ಹಳಸಿರುವಂತೆಯೇ ಹಳದಿ ಸಮುದ್ರದಲ್ಲಿ ಚೀನಾ ನಡೆಸಿರುವ ಸಮರ ತರಬೇತಿ ಕಾರ್ಯಕ್ರಮ ಸಾಕಷ್ಚು ಚರ್ಚೆಗೆ ಕಾರಣವಾಗುತ್ತಿದೆ.
ಚೀನಾದ ಲಯೋನಿಂಗ್ ಸಮರನೌಕೆ ಹಲವಾರು ಯುದ್ಧ ವಿಮಾನಗಳೊಂದಿಗೆ ಹಳದಿ ಸಮುದ್ರದಲ್ಲಿ ಸೇನಾ ಕವಾಯತು ನಡೆಸುತ್ತಿದೆ. ಮೂಲಗಳ ಪ್ರಕಾರ ಈ ವಿವಾದಿತ ಸೇನಾ ಕವಾಯತು ಕಾರ್ಯಕ್ರಮದಲ್ಲಿ ಅತ್ಯಾಧುನಿಕ ಜೆ-15 ಯುದ್ಧ ವಿಮಾನ ಕೂಡ ಪಾಲ್ಗೊಂಡಿದ್ದು, ಅದರೊಂದಿಗೆ ಹಲವು ಯುದ್ಧ ಟ್ಯಾಂಕರ್ ಗಳು, ಹೆಲಿಕಾಪ್ಟರ್ ಗಳು ಹಾಗೂ ಕ್ಷಿಪಣಿ ಉಡಾವಣಾ ವಾಹಕಗಳು ಕವಾಯತಿನಲ್ಲಿ ಪಾಲ್ಗೊಂಡಿವೆ ಎಂದು ತಿಳಿದುಬಂದಿದೆ. ಜೆ-15 ಯುದ್ಧ ವಿಮಾನ ಚೀನಾ ನೌಕಾಪಡೆಗೆಂದೇ ವಿಶೇಷವಾಗಿ ನಿರ್ಮಾಣವಾಗಿರುವ ಯುದ್ಧ ವಿಮಾನವಾಗಿದ್ದು, ಅತ್ಯಾಧುನಿಕ ಕ್ಷಿಪಣಿಗಳನ್ನು ಮತ್ತು ರಾಡಾರ್ ವ್ಯವಸ್ಥೆಯನ್ನು ಹೊಂದಿದೆ. ಅಂತೆಯೇ ಆಗಸದಲ್ಲೇ ವಿಮಾನದಿಂದ ಇಂಧನ ತುಂಬಿಸಿಕೊಳ್ಳುವ ತಂತ್ರಜ್ಞಾನವನ್ನೂ ಕೂಡ ಈ ವಿಮಾನ ಹೊಂದಿದ್ದು, ಯುದ್ಧದ ಸಂದರ್ಭದಲ್ಲಿ ಇತರೆ ವಿಮಾನದಿಂದ ಇಂಧನ ಪಡೆಯಲು ನೆರವಾಗುತ್ತದೆ ಎಂದು ತಿಳಿದುಬಂದಿದೆ.
ಇನ್ನು ಲಯೋನಿಂಗ್ ಸಮರ ನೌಕೆ 2012ರಲ್ಲಿ ಚೀನಾ ಸೇನೆಗೆ ಸೇರ್ಪಡೆಯಾಗಿದ್ದು, ಸೇರ್ಪಡೆಯಾದಾಗಿನಿಂದಲೂ ಸತತವಾಗಿ ಈ ನೌಕೆಯನ್ನು ವಿವಿಧ ಕವಾಯತುಗಳಲ್ಲಿ ಬಳಸಿಕೊಳ್ಳಲಾಗಿದೆ. ಈ ಹಿಂದೆ ಬೊಹೈ ಕರಾವಳಿ ತೀರದಲ್ಲಿ ಚೀನಾ ಮತ್ತು ಕೊರಿಯಾ ದೇಶಗಳು ನಡೆಸಿದ್ದ ಜಂಟಿ ಕವಾಯತು ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಚೀನಾ ಪಡೆಗಳು ಹಳದಿ ಸಮುದ್ರದಲ್ಲಿ ನಡೆಸುತ್ತಿರುವ ಕವಾಯತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.