ವಾಷಿಂಗ್ ಟನ್: ಭಾರತ ಸರ್ಕಾರ ನೆಟ್ ನ್ಯೂಟ್ರಾಲಿಟಿ ಪರವಾಗಿ ನಿರ್ಧಾರ ಕೈಗೊಂಡಿರುವುದಕ್ಕೆ ಫೇಸ್ ಬುಕ್ ನ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತ ನೆಟ್ ನ್ಯೂಟ್ರಾಲಿಟಿ ಪರ ನಿಂತಿದ್ದರೂ, ಭಾರತ ಹಾಗೂ ವಿಶ್ವಾದ್ಯಂತ ಅಂತರ್ಜಾಲ ಸಂಪರ್ಕವನ್ನು ಉತ್ತಮಗೊಳಿಸುವ ಯೋಜನೆಗೆ ಬದ್ಧವಾಗಿರುವುದಾಗಿ ಹೇಳಿದ್ದಾರೆ.
ನೆಟ್ ನ್ಯೂಟ್ರಾಲಿಟಿ ಪರವಾಗಿ ಭಾರತೀಯ ದೂರಸಂಪರ್ಕ ಪ್ರಾಧಿಕಾರ(ಟ್ರಾಯ್) ನಿರ್ಧಾರ ಕೈಗೊಂಡಿರುವ ಬಗ್ಗೆ ಫೇಸ್ ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಜುಕರ್ಬರ್ಗ್, ಇಂಟರ್ ನೆಟ್ ಡಾಟ್ ಆರ್ಗ್ ಹಲವು ಕ್ರಮಗಳನ್ನೊಳಗೊಂಡಿದೆ. ಪ್ರತಿಯೊಬ್ಬರಿಗೂ ಇಂಟರ್ ನೆಟ್ ಸೌಲಭ್ಯ ಸಿಗುವವರೆಗೆ ಕೆಲಸ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ಫೇಸ್ ಬುಕ್ ನ ಇಂಟರ್ ನೆಟ್ ಡಾಟ್ ಆರ್ಗ್ ಯೋಜನೆ ಈಗಾಗಲೇ ವಿಶ್ವಾದ್ಯಂತ ಹಲವು ಜನರ ಜೀವನವನ್ನು ಸುಧಾರಿಸಿದೆ. ಭಾರತದೊಂದಿಗೆ ವಿಶ್ವವನ್ನು ಸಂಪರ್ಕಿಸುವುದು ಮುಖ್ಯವಾದ ಗುರಿ, ಆ ಗುರಿಯನ್ನು ನಾವು ಬಿಟ್ಟುಕೊಡುವುದಿಲ್ಲ, ಏಕೆಂದರೆ ಭಾರದಲ್ಲಿ ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನರು ಅಂತರ್ಜಾಲ ಸಂಪರ್ಕವನ್ನೇ ಹೊಂದಿಲ್ಲ ಎಂದು ಜುಕರ್ಬರ್ಗ್ ಹೇಳಿದ್ದಾರೆ. ಭಾರತೀಯರನ್ನು ಅಂತರ್ಜಾಲ ಸಂಪರ್ಕದೊಂದಿಗೆ ಬೆಸೆಯುವುದರಿಂದ ಹಲವರಿಗೆ ಉದ್ಯೋಗ ಸಿಗುತ್ತದೆ ಅಂತೆಯೇ ವಿದ್ಯಾಭ್ಯಾಸದ ಅವಕಾಶಗಳು ಹೆಚ್ಚಾಗುತ್ತವೆ ಇದರ ಅಗತ್ಯತೆ ಇರುವವರ ಬಗ್ಗೆ ಕಾಳಜಿ ವಹಿಸುತ್ತೇವೆ ಆದ್ದರಿಂದ ನಾವು ಭಾರತೀಯರನ್ನು ಅಂತರ್ಜಾಲದೊಂದಿಗೆ ಬೆಸೆಯುವುದಕ್ಕೆ ಬದ್ಧರಾಗಿದ್ದೇವೆ ಎಂದು ಜುಕರ್ಬರ್ಗ್ ಹೇಳಿದ್ದಾರೆ.