ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿರುವ ಅಲ್ಪ ಸಂಖ್ಯಾತ ಹಿಂದೂ ಸಮುದಾಯದ ದಶಕಗಳ ಕನಸು ನನಸಾಗಿದ್ದು, ಅಂತಿಮವಾಗಿ ಪಾಕಿಸ್ತಾನ ಸಂಸತ್ತು ಹಿಂದೂ ವಿವಾಹ ಮಸೂದೆ-2015ಕ್ಕೆ ಅನುಮೋದನೆ ನೀಡಿದೆ.
ಈ ಹಿಂದೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್ ಹಾಗೂ ಬಹಾಯಿ ಸಮುದಾಯದವರು ತಮ್ಮ ವಿವಾಹವನ್ನು ನೋಂದಣಿ ಮಾಡಿಸಲು ಯಾವುದೇ ವ್ಯವಸ್ಥೆಯಿರಲಿಲ್ಲ. ಹೀಗಾಗಿ ತಮ್ಮ ವಿವಾಹಕ್ಕೂ ಕಾನೂನು ಮಾನ್ಯತೆ ನೀಡಬೇಕು ಎಂದು ಪಾಕಿಸ್ತಾನದಲ್ಲಿರುವ ಅಲ್ಪ ಸಂಖ್ಯಾತ ಹಿಂದೂಗಳು ದಶಕಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದರು. ಪಾಕಿಸ್ತಾನದಲ್ಲಿರುವ ಹಿಂದೂಗಳು ವಿದೇಶ ಪ್ರಯಾಣದ ಸಂದರ್ಭದಲ್ಲಿ ವಿವಾಹ ಪ್ರಮಾಣ ಪತ್ರವಿಲ್ಲದೇ ತೀವ್ರ ತೊಂದರೆ ಅನುಭವಿಸಬೇಕಾಗುತ್ತಿತ್ತು. ಇದೀಗ ಈ ಎಲ್ಲ ತೊಂದರೆಗಳಿಗೂ ಪಾಕಿಸ್ತಾನ ಸಂಸದೀಯ ಸಮಿತಿ ಅಂತ್ಯ ಹಾಡಿದ್ದು, ಹಿಂದೂ ವಿವಾಹ ಮಸೂದೆ-2015ಕ್ಕೆ ಅನುಮೋದನೆ ನೀಡಿದೆ.
ಪಾಕಿಸ್ತಾನದ ಸುದ್ದಿ ಸಂಸ್ಥೆ ಡಾನ್ ವರದಿ ಮಾಡಿರುವಂತೆ ಹಿಂದೂ ಸಮುದಾಯದ ಐದು ಮಂದಿ ಸಂಸತ್ ಸದಸ್ಯರು ಹಿಂದೂ ವಿವಾಹ ಮಸೂದೆಯ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದು, ಪಾಕಿಸ್ತಾನ ಮುಸ್ಲಿಂ ಲೀಗ್ ನ ಚೌದರಿ ಮೆಹಮೂದ್ ಬಷೀರ್ ವೀರ್ಕ್ ಅವರು ಅಧ್ಯಕ್ಷರಾಗಿದ್ಧ ಸ್ಥಾಯಿ ಸಮಿತಿ ಹಿಂದೂ ವಿವಾಹ ಮಸೂದೆ-2015ಕ್ಕೆ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ. ಹಲವು ಷರತ್ತುಗಳು ಮತ್ತು ಕಾನೂನುಗಳೊಂದಿಗೆ ಹಿಂದೂ ವಿವಾಹ ಮಸೂದೆಗೆ ಪಾಕಿಸ್ತಾನ ಸಂಸದೀಯ ಸಮಿತಿ ಅನುಮೋದನೆ ನೀಡಿದೆ.
ಕ್ಲಾಸ್ 12 ಉಪವಿಭಾಗ (2)(ಸಿ) ಪ್ರಕಾರ ದಂಪತಿಗಳಲ್ಲಿ ಯಾರಾದರೂ ಕ್ರಿಮಿನಲ್ ಹಿನ್ನಲೆಯಿಂದ 4 ವರ್ಷಗಳ ಕಾಲ ಜೈಲಿಗೆ ಹೋಗಿದ್ದರೆ ಮತ್ತೊಬ್ಬರು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ಈ ಹಿಂದೆ ಈ ಅವಧಿ ಮೂರು ವರ್ಷಕ್ಕೆ ಸೀಮಿತವಾಗಿತ್ತು. ಇನ್ನು ಮದುವೆ ರದ್ಧತಿ ಕುರಿತಾಗಿದ್ದ ಕ್ಲಾಸ್ 12(2ಡಿ) ಕಾನೂನನ್ನು ತೆಗೆದುಹಾಕಲು ಸ್ಥಾಯಿ ಸಮಿತಿ ಸಮ್ಮತಿ ಸೂಚಿಸಿದೆ ಎಂದು ತಿಳಿದುಬಂದಿದೆ.