ಕರಾಚಿ: ಉಗ್ರ ಸಂಘಟನೆಗಳ ಮೇಲೆ ದಾಳಿ ನಡೆಸಿರುವ ಪಾಕಿಸ್ತಾನ, ಭಯೋತ್ಪಾದಕ ಕೃತ್ಯಗಳನ್ನು ನಡೆಸಿದ್ದ, ಅಲ್ ಖೈದಾ ಸಂಘಟನೆಯ ಪ್ರಮುಖ ನಾಯಕ ಅಹ್ಮದ್ ಓಮರ್ ಸಯೀದ್ ಶೇಖ್ ನನ್ನು ಬಂಧಮುಕ್ತಗೊಳಿಸಲು ಯತ್ನಿಸುತ್ತಿದ್ದ 97ಕ್ಕೂ ಹೆಚ್ಚು ಭಯೋತ್ಪಾದಕರನ್ನು ಬಂಧಿಸಿದೆ.
ಅಹ್ಮದ್ ಓಮರ್ ಸಯೀದ್ ಅಮೆರಿಕದ 9 /11 ರ ದಾಳಿಯ ಉಗ್ರನಾಗಿದ್ದಾನೆ. ಪಾಕ್ ನಲ್ಲಿ ನಡೆದ ಭಯೋತ್ಪಾದಕ ಕೃತ್ಯ ನಡೆಸಲು ಬಂಧಿತ ಉಗ್ರರ ತಂಡ ಜಂಟಿ ಕಾರ್ಯಾಚರಣೆ ತಂಡ ರಚಿಸಿಕೊಂಡಿತ್ತು, ಅಲ್ಲದೇ ಪಾಕಿಸ್ತಾನದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿಯಲ್ಲಿ ಬಂಧಿತ ಉಗ್ರರ ಪಾತ್ರವಿತ್ತು ಎಂಬುದನ್ನು ಅಲ್ಲಿನ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಸೀಮ್ ಸಲೀಮ್ ಬಜ್ವಾ ಹೇಳಿದ್ದಾರೆ.
ಬಂಧಿತ ಉಗ್ರರು ಲಷ್ಕರ್-ಎ- ತೊಯ್ಬಾ, ತೆಹರಿಕ್-ಎ- ತಾಲಿಬಾನ್ ಪಾಕಿಸ್ತಾನ್, ಲಷ್ಕರ್- ಎ- ಝಂಗ್ವಿ, ಅಲ್ ಖೈದಾ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ. ಕೆಲವು ತಿಂಗಳ ಹಿಂದೆ ಬಂಧಿಸಲಾಗಿದ್ದ ಉಗ್ರರಿಂದ ಮಾಹಿತಿ ಪಡೆದು ಈ ಉಗ್ರರನ್ನು ಬಂಧಿಸಲಾಗಿದೆ ಎಂದು ಪಾಕ್ ತಿಳಿಸಿದೆ. ಮರಣದಂಡನೆಗೆ ಗುರಿಯಾಗಿರುವ ಅಲ್ ಖೈದಾ ನಾಯಕ ಉಮರ್ ಶೇಖ್ ನನ್ನು ಬಂಧಮುಕ್ತಗೊಳಿಸಲು ಈ ಉಗ್ರರು ಯತ್ನಿಸುತ್ತಿದ್ದರು.