ಮ್ಯೂನಿಚ್: ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಇಸಿಸ್ ಮೇಲೆ ದಾಳಿ ಮಾಡುವ ನೆಪದಲ್ಲಿ ರಷ್ಯಾ ಮಿಲಿಟರಿ ಪಡೆಗಳು ಸಿರಿಯಾದಲ್ಲಿನ ಅಮಾಯಕ ನಾಗರಿಕರ ಮೇಲೆ ಮಾಡುತ್ತಿರುವ ಬಾಂಬ್ ದಾಳಿಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಫ್ರಾನ್ಸ್ ಫ್ರಧಾನಿ ಮ್ಯಾನುಯೆಲ್ ವಾಲ್ಸ್ ಹೇಳಿದ್ದಾರೆ.
ಜರ್ಮನಿಯ ಮ್ಯೂನಿಚ್ ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಭದ್ರತಾ ಸಮ್ಮೇಳನದಲ್ಲಿ ಶನಿವಾರ ಮಾತನಾಡಿದ ಫ್ರಾನ್ಸ್ ಪ್ರಧಾನಿ ಮ್ಯಾನುಯೆಲ್ ವಾಲ್ಸ್ ಅವರು, ರಷ್ಯಾ ಈ ಕೂಡಲೇ ಸಿರಿಯನ್ ನಾಗರಿಕರ ಮೇಲೆ ಮಾಡುತ್ತಿರುವ ಬಾಂಬ್ ದಾಳಿಯನ್ನು ನಿಲ್ಲಿಸಬೇಕು. ಸಂಘರ್ಷಿತ ಪ್ರದೇಶದಲ್ಲಿ ಶಾಂತಿ ನೆಲೆಸುವ ಅನಿವಾರ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ನಾವು ರಷ್ಯಾ ಮತ್ತು ಆ ದೇಶದ ಹಿತಾಸಕ್ತಿಗಳನ್ನು ಗೌರವಿಸುತ್ತೇವೆ. ಆದರೆ ಶಾಂತಿ ಸ್ಥಾಪನೆಗೆ ಸಂಘರ್ಷವನ್ನು ಬಿಟ್ಟು ಪರ್ಯಾಯ ಮಾರ್ಗವನ್ನು ಅನುಸರಿಸಿದರೆ ಒಳಿತು. ಹೀಗಾಗಿ ರಷ್ಯಾ ಸೇನೆ ಸಿರಿಯಾ ನಾಗರಿಕರ ಮೇಲೆ ಮಾಡುತ್ತಿರುವ ಬಾಂಬ್ ದಾಳಿಯನ್ನು ಕೂಡಲೇ ನಿಲ್ಲಿಸಬೇಕು" ಎಂದು ಮ್ಯಾನುಯೆಲ್ ವಾಲ್ಸ್ ಹೇಳಿದರು. ಇದೇ ವೇಳೆ "ನೀತಿ ತಯಾರಕರು ಎಚ್ಚರದಿಂದಿರದಿದ್ದರೆ ಯೂರೋಪಿಯನ್ ಯೋಜನೆ ಕಣ್ಮರೆಯಾಗುತ್ತದೆ. ಕೇವಲ ಆರ್ಥಿಕವಾಗಿ ಮಾತ್ರವಲ್ಲ ರಕ್ಷಣಾತ್ಮಕವಾಗಿಯೂ ಯೂರೋಪಿಯನ್ ಯೋಜನೆ ಪ್ರಮುಖವಾಗಿದೆ" ಎಂದು ವಾಲ್ಸ್ ಇದೇ ವೇಳೆ ಎಚ್ಚರಿಕೆ ನೀಡಿದರು.
ಫ್ರಾನ್ಸ್ ಆರೋಪ ತಳ್ಳಿ ಹಾಕಿದ ರಷ್ಯಾ
ಇನ್ನು ಇದೇ ವೇಳೆ ಫ್ರಾನ್ಸ್ ಫ್ರಧಾನಿ ವಾಲ್ಸ್ ಅವರ ಆರೋಪವನ್ನು ತಳ್ಳಿ ಹಾಕಿರುವ ರಷ್ಯಾ, ತನ್ನ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ರಷ್ಯಾ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಅವರು, ಸಿರಿಯಾ ನಾಗರಿಕರ ಮೇಲೆ ರಷ್ಯಾ ಸೇನೆ ಬಾಂಬ್ ದಾಳಿ ಮಾಡಿದ ಕುರಿತು ಯಾವುದೇ ಸಾಕ್ಷ್ಯಾಗಳಿಲ್ಲ. ಹೀಗಿರುವಾಗ ಫ್ರಾನ್ಸ್ ಯಾವ ಆಧಾರದ ಮೇಲೆ ರಷ್ಯಾ ಮೇಲೆ ಆರೋಪ ಹೊರಿಸುತ್ತಿದೆ ತಿಳಿದಿಲ್ಲ. ಫ್ರಾನ್ಸ್ ಆರೋಪ ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದ್ದಾರೆ.
ಅಂತೆಯೇ ರಷ್ಯಾ ತನ್ನ ರಹಸ್ಯ ಗುರಿಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಸಿರಿಯಾದಲ್ಲಿ ಸೇನಾ ಕಾರ್ಯಾಚರಣೆ ನಡೆಸುತ್ತಿಲ್ಲ. ನಾವು ನಮ್ಮ ದೇಶದ ಹಿತಾಸಕ್ತಿ ರಕ್ಷಣೆಗಾಗಿ ಮತ್ತು ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಮಾಡುತ್ತಿದ್ದೇವೆ ಅಷ್ಟೇ. ಉಗ್ರಗಾಮಿಗಳನ್ನು ಮಟ್ಟಹಾಕುವುದೇ ಮಾಸ್ಕೋದ ಪ್ರಮುಖ ಉದ್ದೇಶ ಎಂದು ರಷ್ಯಾ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಅವರು ಹೇಳಿದರು.