ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ನಲ್ಲಿ ಭಾನುವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿದೆ.
ಭೂಕಂಪನ ಮಾಪನ ಇಲಾಖೆಯ ಮೂಲಗಳು ತಿಳಿಸಿರುವಂತೆ ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಗರದಲ್ಲಿ ಇಂದು ಬೆಳಗ್ಗೆ 5.8ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ. ಭೂಮಿಯ ಕಂಪನದ ರಭಸಕ್ಕೆ ನಗರದ ಪ್ರಮುಖ ಕಟ್ಟಡವೊಂದು ಜಖಂಗೊಂಡಿದ್ದು, ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿರುವ ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಪ್ರಸ್ತುತ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಭೂಕಂಪನದಿಂದಾಗಿ ಈ ವರೆಗೂ ಯಾರಿಗೂ ಹಾನಿಯಾದ ಕುರಿತು ವರದಿಯಾಗಿಲ್ಲ.
ಕ್ರೈಸ್ಟ್ ಚರ್ಚ್ ನಗರದಿಂದ ಪಶ್ಚಿಮಕ್ಕೆ ಸುಮಾರು 17 ಕಿ.ಮೀ ದೂರದಲ್ಲಿ ಮತ್ತು 8 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಕಂಪನ ಸಂಭವಿಸಿದ 5 ನಿಮಿಷಗಳ ವರೆಗೆ ಇದರ ಉಪಕಂಪನಗಳು ಸಂಭಿವಿಸಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಭೂಕಂಪನ ಸಂಭವಿಸುತ್ತಿದ್ದಂತೆಯೇ ದ್ವೀಪರಾಷ್ಟ್ರದ ಭೂಕಂಪನ ಇಲಾಖೆ ಎಚ್ಚರಿಕೆ ರವಾನಿಸಿದೆ.