ಕೈರೊ: ಇಸ್ಲಾಂ ನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಈಜಿಪ್ಟ್ ನ್ಯಾಯಾಲಯ ನಾಲ್ವರು ಯುವ ಕಾಪ್ಟಿಕ್ ಕ್ರಿಶ್ಚಿಯನ್ನರಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ನಾಲ್ವರಲ್ಲಿ ಮೂವರನ್ನು ಜೈಲಿಗೆ ಕಳಿಸಲಾಗಿದ್ದರೆ ಇನ್ನೋರ್ವನಿಗೆ ಬಾಲಾಪರಾಧಿ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲಾಗಿದೆ. ಈಜಿಪ್ಟ್ ನ ಮುಸ್ಲಿಂ ನಿವಾಸಿಗಳು ಕಾಪ್ಟಿಕ್ ಕ್ರೈಸ್ತ ಶಿಕ್ಷಕ ಗ್ಯಾಡ್ ಯುಸೂಫ್ ಯುನಾನ್ ಹಾಗೂ ಆತನ 5 ವಿದ್ಯಾರ್ಥಿಗಳ ವಿರುದ್ಧ ಇಸ್ಲಾಂ ನ್ನು ನಿಂದಿಸಿದ್ದಾರೆಂದು ಆರೋಪಿಸಿ ಕೋರ್ಟ್ ಗೆ ದೂರು ನೀಡಿದ್ದರು.
ಇಸ್ಲಾಮಿಕ್ ಉಗ್ರ ಸಂಘಟನೆಯನ್ನು ಅಪಹಾಸ್ಯ ಮಾಡುವ ವೀಡಿಯೊ ಕ್ಲಿಪ್ ನಲ್ಲಿ ಗ್ಯಾಡ್ ಯುಸೂಫ್ ಯುನಾನ್ ಹಾಗೂ ಆತನ 5 ವಿದ್ಯಾರ್ಥಿಗಳು ಗುರುತಿಸಿಕೊಂಡಿದ್ದರು. ಇಸ್ಲಾಂ ನ್ನು ನಿಂದಿಸಿದ್ದಕ್ಕಾಗಿ ಜ.30 ರಂದು ಯುನಾನ್ ಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈಜಿಪ್ಟ್ ನ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.10 ರಷ್ಟು ಕಾಪ್ಟಿಕ್ ಕ್ರೈಸ್ತರಿದ್ದು ತಾರತಮ್ಯ ಮತ್ತು ಶೋಷಣೆ ಎದುರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈಜಿಪ್ಟ್ ನ್ಯಾಯಾಲಯ ಧರ್ಮ ನಿಂದನೆ ಆರೋಪದಡಿ ಹಲವು ಮುಸ್ಲಿಮರು ಹಾಗೂ ಕ್ರೈಸ್ತರನ್ನು ಶಿಕ್ಷೆಗೆ ಗುರಿಪಡಿಸಿದೆ.