ಟೋಕಿಯೋ: ನಮ್ಮಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಎಂಬ ನೆಪವೊಡ್ಡಿ ಸರ್ಕಾರಗಳು ಸಾಲು ಸಾಲು ಶಾಲೆಗಳನ್ನೇ ಮುಚ್ಚುವುದನ್ನು ಕೇಳಿದ್ದೇವೆ. ಆದರೆ, ಜಪಾನ್‍ನ ಸ್ಥಿತಿಯೇ ಬೇರೆ.
ಆ ದೇಶದ ಉತ್ತರ ಭಾಗದ ಹೊಕೈಡೋ ದ್ವೀಪದಲ್ಲಿ ಕೇವಲ ಒಬ್ಬಳೇ ಒಬ್ಬ ವಿದ್ಯಾರ್ಥಿನಿಗಾಗಿ ಅಲ್ಲಿನ ಸರ್ಕಾರ ನಷ್ಟದ ನಡುವೆಯೂ ಒಂದಿಡೀ ರೈಲು ಮೀಸಲಿಟ್ಟಿದೆ. ಜಪಾನ್‍ನ ಉತ್ತರ ವಲಯದ ಕಮಿ ಶಿರಾತ್ಕಿ ಎಂಬ ರೈಲು ನಿಲ್ದಾಣದಲ್ಲಿ ನಿತ್ಯವೂ ರೈಲಿಗಾಗಿ ಕಾಯುವುದು ಒಬ್ಬಳೇ ವಿದ್ಯಾರ್ಥಿನಿ ಮಾತ್ರ. ಆ ಮಾರ್ಗದಲ್ಲಿ ಪ್ರಯಾಣಿಸುವುದು ಆಕೆಯೊಬ್ಬಳೇ. ಆಕೆ ಶಾಲೆಗೆ ಹೋಗಿ ಬರಲೆಂದೇ ರೈಲ್ವೆ ಇಲಾಖೆ ನಷ್ಟದ ನಡುವೆಯೂ ತನ್ನ ಸೇವೆ ಮುಂದುವರಿಸಿದೆ. ಬೆಳಗ್ಗೆ ಶಾಲೆಗೆ ತೆರಳಲೆಂದು ಕಮಿ ಶಿರಾತ್ಕಿ ರೈಲು ನಿಲ್ದಾಣಕ್ಕೆ ಬರುವ ವಿದ್ಯಾರ್ಥಿನಿಯನ್ನು ಶಾಲೆಗೆ ಕರೆದೊಯ್ಯುವ ರೈಲು, ಮರಳಿ ಬರುವುದು ಆಕೆ ಶಾಲೆಯಿಂದ ಮನೆಗೆ ಬರುವಾಗಲೇ. ಕಮಿ ಶಿರಾತ್ಕಿ ನಗರ ಪ್ರದೇಶಕ್ಕಿಂತ ಅತ್ಯಂತ ದೂರದಲ್ಲಿದೆ. ಹೀಗಾಗಿ ಅಲ್ಲಿಗೆ ತೆರಳಲು ಪ್ರಯಾಣಿಕರೇ ಇರಲಿಲ್ಲ.
ಸರಕು ಸಾಗಣೆಯಂತೂ ಇರಲೇ ಇಲ್ಲ. ಹೀಗಾಗಿ ಈ ಮಾರ್ಗ ರದ್ದುಗೊಳಿಸಲು ಅಲ್ಲಿನ ಸರ್ಕಾರ 3 ವರ್ಷಗಳ ಹಿಂದೆ ನಿರ್ಧರಿಸಿತ್ತು. ವಿದ್ಯಾರ್ಥಿನಿ ಶಾಲೆಗೆ ತೆರಳುವುದು ರೈಲ್ವೆ ಇಲಾಖೆ ಗಮನಕ್ಕೆ ಬಂದಿತ್ತು. ಆಕೆಯ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದೆಂಬ ನಿಲುವಿಗೆ ಬಂದ ಇಲಾಖೆ, ಆಕೆ ಪದವಿ ಪಡೆಯುವ ವರೆಗೆ ಸಂಚಾರ ಮುಂದುವರಿಸಲು ನಿರ್ಧಾರ ಕೈಗೊಂಡಿತು. ಅಷ್ಟೇ ಅಲ್ಲ, ಆಕೆಗಾಗಿ ರೈಲಿನ ವೇಳಾ ಪಟ್ಟಿಯನ್ನೇ ಬದಲಿಸಿತು. ಈ ವರ್ಷದ ಮಾರ್ಚ್‍ನಲ್ಲಿ ವಿದ್ಯಾರ್ಥಿನಿ ಪದವಿ ಪಡೆಯಲಿದ್ದು, ಅಲ್ಲಿಗೆ ಈ ಮಾರ್ಗ ಸ್ತಬ್ಧಗೊಳ್ಳಲಿದೆ.
ಸರ್ಕಾರಕ್ಕೆ ಹ್ಯಾಟ್ಸಾಫ್ : ``ಒಬ್ಬ ವಿದ್ಯಾರ್ಥಿಗಾಗಿ ನಷ್ಟದ ನಡುವೆಯೂ ರೈಲು ಸಂಚಾರ ಮುಂದುವರಿಸಿರುವ ಈ ದೇಶಕ್ಕಾಗಿ ನಾವು ಪ್ರಾಣ ಅರ್ಪಿಸಲೂ ಸಿದ್ಧ,'' ಎಂದು ಅಲ್ಲಿನ ವ್ಯಕ್ತಿಯೊಬ್ಬರು ಫೇಸ್‍ಬುಕ್‍ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರ ಜನರ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿಕೊಂಡಿರುವುದಕ್ಕೆ ಮತ್ತು ಉತ್ತಮ ಆಡಳಿತಕ್ಕೆ ಇದು ನಿದರ್ಶನ. ಯಾವ ಮಕ್ಕಳೂ ಹಿಂದುಳಿಯಬಾರದು ಎಂಬುದನ್ನು ಇದು ಹೇಳುತ್ತಿದೆ ಎಂದು ಅಲ್ಲಿನ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.