ನ್ಯೂಜೆರ್ಸಿ: ಪ್ರೀತಿಸಿದ ಯುವತಿಗೆ ಇಷ್ಟವಿಲ್ಲ ಎಂಬ ಕಾರಣಕ್ಕೆ 3 ವರ್ಷದ ಮಗನನ್ನು ತಂದೆಯೊಬ್ಬ ಹತ್ಯೆ ಮಾಡಿರುವ ಘಟನೆಯೊಂದು ನ್ಯೂಜೆರ್ಸಿಯಲ್ಲಿ ನಡೆದಿದೆ.
ಬ್ರೆಂಡನ್ (3) ಹತ್ಯೆಯಾದ ಬಾಲಕನಾಗಿದ್ದಾನೆ. ಬಾಲಕನನ್ನು ಹತ್ಯೆ ಮಾಡಿದ ತಂದೆಯನ್ನು ಡೇವಿಡ್ ಕ್ರಿಯೆಟೋ (22) ಎಂದು ಹೇಳಲಾಗುತ್ತಿದ್ದು, ತಾನು ಪ್ರೀತಿಸಿದ 17 ವರ್ಷದ ಬಾಲೆ ತನ್ನ ಮಗನನ್ನು ಇಷ್ಟ ಪಡದ ಕಾರಣ ತಂದೆಯೊಬ್ಬ ಮಗನನ್ನು ಹತ್ಯೆ ಮಾಡಲು ಕಾರಣವಾಗಿದೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.
ಕಳೆದ ವರ್ಷ ಅಕ್ಟೋಬರ್ 13ರಂದು ನ್ಯೂಜೆರ್ಸಿಯ ಕೂಪರ್ ರಿವರ್ ಪಾರ್ಕ್ ನಲ್ಲಿ ಮಗುವಿನ ದೇಹವೊಂದು ಪತ್ತೆಯಾಗಿತ್ತು. ಇದರಂತೆ ಮಗುವಿನ ತಂದೆ ಕ್ರಿಯೆಟೋ ತನ್ನ ಮಗ ಕಾಣೆಯಾಗಿದ್ದಾನೆಂದು ಹೇಳಿ ಪೊಲೀಸರ ಬಳಿ ಪ್ರಕರಣ ದಾಖಲಿಸಿದ್ದರು. ರಾತ್ರಿ ಮಲಗಿದ್ದ ಮಗು ಬೆಳಗ್ಗೆ ಎದ್ದು ನೋಡುತ್ತಿದ್ದಂತೆ ಕಣ್ಮರೆಯಾಗಿದ್ದ. ರಾತ್ರಿ ಮಲಗುವ ವೇಳೆ ಮಗು ಪೈಜಾಮ ಹಾಗೂ ಮಿಕ್ಕಿ ಮೌಸ್ ಇರುವ ಚಪ್ಪಲಿಯನ್ನು ಹಾಕಿಕೊಂಡಿದ್ದ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದನು.
ದೂರಿನನ್ವಯ ಬಾಲಕನ ಹುಡಕಾಟಕ್ಕೆ ತೊಡಗಿದ್ದ ಪೊಲೀಸರಿಗೆ ನ್ಯೂಜೆರ್ಸಿಯಲ್ಲಿರುವ ನದಿಯೊಂದರಲ್ಲಿ ಬಾಲಕನ ದೇಹ ಪತ್ತೆಯಾಗಿತ್ತು. ತನಿಖೆ ವೇಳೆ ಬಾಲಕನಿಗೆ ಹಿಂಸೆ ನೀಡಿ, ಉಸಿರುಗಟ್ಟಿಸಿ ಹತ್ಯೆ ಮಾಡಿರುವುದಾಗಿ ತಿಳಿದುಬಂದಿತ್ತು. ತನಿಖೆ ವೇಳೆ ಬಾಲಕನ ತಂದೆ ಕ್ರಿಯೆಟೋ ಕೈವಾಡವಿರುವಂತೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು.
ಕ್ರಿಯೆಟೋ 17 ವರ್ಷದ ಬಾಲೆಯೊಬ್ಬಳನ್ನು ಪ್ರೀತಿಸುತ್ತಿದ್ದು, ಆ ಯುವತಿಗೆ ಕ್ರಿಯೆಟೋ ಮಗ ಹಾಗೂ ಪತ್ನಿ ಜೊತೆ ಇರುವುದು ಇಷ್ಟವಿರಲಿಲ್ಲ. ಹೀಗಾಗಿ ಮಗ ಹಾಗೂ ಪತ್ನಿಯ ಜೊತೆ ಇರುವ ಸಂಬಂಧವನ್ನು ಕಡಿದುಕೊಳ್ಳುವಂತೆ ಹೇಳಿದ್ದಾಳೆ. ಒಂದು ವೇಳೆ ಸಂಬಂಧ ಮುಂದುವರೆಸಿದ್ದೇ ಆದರೆ, ತಾನು ದೂರಾಗುತ್ತೇನೆಂದು ಹೇಳಿದ್ದಾಳೆ. ಹೀಗಾಗಿ ಪ್ರೇಯಸಿಯ ಇಚ್ಛೆಯಂತೆ ಕ್ರಿಯೆಟೋ ಸಂಬಂಧವನ್ನು ಕಡಿದುಕೊಳ್ಳಲು ಇಚ್ಛಿಸಿ ಈ ಕೃತ್ಯವನ್ನು ಎಸಗಿದ್ದಾನೆಂದು ಹೇಳಲಾಗುತ್ತಿದೆ. ಇದೀಗ ಮಗುವಿನ ತಂದೆ ಕ್ರಿಯೆಟೋನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.