ಕಾಬೂಲ್: ಶನಿವಾರ ಕಾಬೂಲ್ ನಡೆದ ಭೀಕರ ಆತ್ಮಹತ್ಯಾ ಬಾಂಬ್ ದಾಳಿ ಹಿನ್ನಲೆಯಲ್ಲಿ ಆಫ್ಘನ್ ಸರ್ಕಾರ ಕಠಿಣಕ್ರಮಕ್ಕೆ ಮುಂದಾಗಿದ್ದು, ಮುಂದಿನ 10 ದಿನಗಳ ಕಾಲ ಯಾವುದೇ ರೀತಿಯ ಬಹಿರಂಗ ಸಭೆಗಳಿಗೆ ನಿಷೇಧ ಹೇರಲಾಗಿದೆ.
ಶನಿವಾರ ತಡರಾತ್ರಿ ವೇಳೆ ಆಫ್ಘನ್ ಆಂತರಿಕ ಸಚಿವಾಲಯ ಬಹಿರಂಗ ಸಭೆ-ಸಮಾರಂಭಗಳಿಗೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಈ ಬಗ್ಗೆ ಭದ್ರತಾ ಪಡೆಗಳಿಗೆ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದ್ದು, ಯಾವುದೇ ರೀತಿಯ ಸಭೆ-ಸಮಾರಂಭಗಳಿಗೆ ಅನುಮತಿ ನೀಡದಂತೆ ಆದೇಶ ರವಾನಿಸಲಾಗಿದೆ. ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ನಿನ್ನೆ ಸಾಂಪ್ರದಾಯಿಕ ಪ್ರತಿಭಟನೆ ವೇಳೆ ನಡೆದ ಭೀಕರ ಆತ್ಮಹತ್ಯಾ ಬಾಂಬ್ ದಾಳಿ ನಡೆದಿತ್ತು.
ಇನ್ನು ಕಾಬೂಲ್ ದಾಳಿಯನ್ನು ವಿಶ್ವ ಸಮುದಾಯ ಖಂಡಿಸಿದ್ದು, ಭಯೋತ್ಪಾದಕ ದಾಳಿ ನಿಯಂತ್ರಣಕ್ಕೆ ಆಫ್ಘನ್ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅಮೆರಿಕ, ಭಾರತ ಸೇರಿದಂತೆ ವಿಶ್ವದ ನಾನಾ ದೇಶಗಳು ಹೇಳಿವೆ. ಅಲ್ಲದೆ ಉಗ್ರ ದಾಳಿ ಮನುಷ್ಯತ್ವದ ಮೇಲೆ ನಡೆದ ದಾಳಿ ಎಂದು ಖಂಡಿಸಿವೆ.