ಇಸ್ಲಾಮಾಬಾದ್: ಪಾಕಿಸ್ತಾನದ 35 ಮಕ್ಕಳ ತಂದೆಯೊಬ್ಬ ಆಧುನಿಕ ದೃತರಾಷ್ಟ್ರನಾಗಲು ಹೊರಟಿದ್ದು, 35 ಮಕ್ಕಳು ಸಾಲದು ಎಂದು ನೂರು ಮಕ್ಕಳನ್ನು ಹೊಂದುವ ಗುರಿ ಹೊಂದಿದ್ದಾನೆ.
ಪಾಕಿಸ್ತಾನದ ಖೆಟ್ಟಾ ನಿವಾಸಿಯಾದ ಸರ್ದಾರ್ ಜಾನ್ ಮಹಮದ್ ಖಿಲ್ಜಿ ಎಂಬ 46 ವರ್ಷದ ವ್ಯಕ್ತಿ ಈಗಾಗಲೇ ಮೂರು ಪತ್ನಿಯರನ್ನು ಹೊಂದಿದ್ದು, ಒಟ್ಟು 35 ಮಕ್ಕಳನ್ನು ಹೊಂದಿದ್ದಾನೆ. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಖಿಲ್ಜಿ ತನ್ನ 35 ಮಕ್ಕಳು ಹಾಗೂ ಮೂವರು ಪತ್ನಿಯರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಾನೆ. ಪ್ರಮುಖ ವಿಚಾರವೆಂದರೆ ಈ 35 ಮಕ್ಕಳು ಸಾಲದು ಎಂಬಂತೆ ಖಿಲ್ಜಿಗೆ 100 ಮಕ್ಕಳನ್ನು ಹೊಂದುವ ಆಸೆಯಂತೆ. ಇದೇ ಕಾರಣಕ್ಕಾಗಿ 4ನೇ ಪತ್ನಿಗಾಗಿ ಹುಡುಕಾಟ ನಡೆಸಿದ್ದಾನೆ ಖಿಲ್ಜಿ.
ಈ ಬಗ್ಗೆ ಆತನೇ ಸ್ವತಃ ಮಾತನಾಡಿದ್ದು, ಹೆಚ್ಚೆಚ್ಚು ಮಕ್ಕಳನ್ನು ಹೊಂದುವುದು ನನ್ನ ಧಾರ್ಮಿಕ ಕರ್ತವ್ಯವಾಗಿದೆ. 100 ಮಕ್ಕಳ ಹೊಂದುವುದು ನನ್ನ ಗುರಿಯಾದರೂ ಎಷ್ಟು ಸಾಧ್ಯವೋ ಅಷ್ಟು ಮಕ್ಕಳನ್ನು ಹೊಂದುತ್ತೇನೆ ಎಂದು ಖಿಲ್ಜಿ ಹೇಳಿದ್ದಾನೆ. ಇಸ್ಲಾಂ ನಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದ್ದು, ಮೊದಲ ಪತ್ನಿ ಅನುಮತಿ ಮೇರೆಗೆ ಹೆಚ್ಚು ಪತ್ನಿಯರನ್ನು ಹೊಂದುವ ಅವಕಾಶವಿದೆ. ಇಸ್ಲಾಂ ಕಾನೂನು ಜಾರಿಯಲ್ಲಿರುವ ಖೆಟ್ಟಾದಲ್ಲಿ ಓರ್ವ ವ್ಯಕ್ತಿ 4 ಪತ್ನಿಯರನ್ನು ಹೊಂದುವ ಅವಕಾಶವಿದೆ. ಹೀಗಾಗಿ ಖಿಲ್ಜಿ ನಾಲ್ಕನೇ ಪತ್ನಿಯ ಹುಡುಕಾಟದಲ್ಲಿ ನಿರತನಾಗಿದ್ದಾನೆ.
ಅಟ್ಟರಿಯ ವಿಚಾರವೆಂದರೆ ಖಿಲ್ಜಿ ಮತ್ತು ಆತನ ಮೂವರು ಪತ್ನಿಯರು ಮಕ್ಕಳೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದು, ಖಿಲ್ದಿ ಶತಕದಾಸೆಗೆ ಅವರ ಪತ್ನಿಯರು ಕೂಡ ಸಾಥ್ ನೀಡಿದ್ದಾರೆ. ಖಿಲ್ಜಿ ನಾಲ್ಕನೇ ಮದುವೆಗೆ ಅವರ ಅಭ್ಯಂತರವೇನೂ ಇಲ್ಲವೆಂದು ಖಿಲ್ಜಿ ಪತ್ನಿಯರು ಹೇಳಿದ್ದಾರೆ.
ಇನ್ನು ಖಿಲ್ಜಿಯ ಶತಕ ಸಾಧನೆಗೆ ಮಹಿಳಾ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಬಹುಪತ್ನಿತ್ವದಿಂದಾಗಿ ಪತ್ನಿಯರು ಖಿನ್ನತೆ ಮತ್ತು ಹತಾಶೆಗೊಳಗಾಗುತ್ತಾರೆ ಎಂದು ಮಹಿಳಾ ಪರ ಹೋರಾಟಗಾರ್ತಿ ರಫಿಯಾ ಝಕಾರಿಯಾ ಹೇಳಿದ್ದಾರೆ. ಒಟ್ಟಾರೆ 100 ಮಕ್ಕಳನ್ನು ಹೊಂದುವ ಮೂಲಕ ಶತಕ ಸಾಧನೆ ಮಾಡ ಹೊರಟಿರುವ ಖಿಲ್ಜಿಗೆ ಮಹಿಳಾ ಪರ ಸಂಘಟನೆಗಳ ವಿರೋಧ ತೊಡಕಾಗುತ್ತದೆಯೇ ಕಾದು ನೋಡಬೇಕಿದೆ.