ಬ್ರುಸೆಲ್ಸ್: ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್ ನಲ್ಲಿ ಮಂಗಳವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಹೊಣೆಯನ್ನು ಇದೀಗ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತಿಕೊಂಡಿರುವುದಾಗಿ ತಿಳಿದುಬಂದಿದೆ.
ಬುಸೆಲ್ಸ್ ನಲ್ಲಿ ನಿನ್ನೆ ಸರಣಿ ಬಾಂಬ್ ಸ್ಫೋಟವೊಂದು ಸಂಭವಿಸಿತ್ತು. ಪ್ಯಾರಿಸ್ ದಾಳಿಯ ನೋವು ಮಾಸುವ ಮುನ್ನವೇ ಇಂತಹದ್ದೊಂದು ಭೀಕರ ದಾಳಿ ನಡೆದದ್ದು ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿತ್ತು. ಪ್ಯಾರಿಸ್ ದಾಳಿಯ ಶಂಕಿತ ಉಗ್ರನನ್ನು ಬ್ರುಸೆಲ್ಸ್ ನಲ್ಲಿ ಬಂಧನಕ್ಕೊಳಪಡಿಸಿದ ಮಾರನೇ ದಿನವೇ ಸ್ಫೋಟ ಸಂಭವಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಂಕಿತ ಉಗ್ರರನನ್ನು ಬಂಧನಕ್ಕೊಳಪಡಿಸಿದ ನಂತರ ಬೆಲ್ಜಿಯಂ ಆಂತರಿಕ ಸಚಿವರು ಅಧಿಕಾರಿಗಳಿಗೆ ಬೆಲ್ಜಿಯಂ ನಲ್ಲಿ ವಿಧ್ವಸಂಕ ಕೃತ್ಯ ನಡೆಸುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆಯನ್ನು ನೀಡಿದ್ದರು.
ಈ ಬೆನ್ನಲ್ಲೆ ಬ್ರುಸೆಲ್ಸ್ ನಲ್ಲಿ ಸರಣಿ ಬಾಂಬ್ ಗಳು ಸ್ಫೋಟಗೊಂಡಿದ್ದವು. ಇದೀಗ ದಾಳಿಯ ಹೊಣೆಯನ್ನು ಹೊತ್ತುಕೊಂಡಿರುವ ಇಸಿಸ್ ಉಗ್ರ ಸಂಘಟನೆಯು, ನಮ್ಮ ಸಂಘಟನೆಯ ಸದಸ್ಯರೇ ವಿಮಾನ ನಿಲ್ದಾಣ ಹಾಗೂ ಮೆಟ್ರೋ ಸ್ಟೇಷನ್ ಬಳಿ ಬಾಂಬ್ ಸ್ಫೋಟಿಸಿದ್ದು ಎಂದು ಹೇಳಿಕೊಂಡಿದೆ.
ಬ್ರುಸೆಲ್ಸ್ ವಿಮಾನ ನಿಲ್ದಾಣ ಹಾಗೂ ಮೆಟ್ರೋ ಸ್ಟೇಷನ್ ನಲ್ಲಿ ಒಂದರ ಹಿಂದೆ ಒಂದರಂತೆ ಬಾಂಬ್ ಗಳು ಸ್ಫೋಟಗೊಂಡಿದ್ದವು. ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಗೊಂಡ 79 ನಿಮಿಷಗಳ ಬಳಿಕ ಮೆಟ್ರೋ ಸ್ಟೇಷನ್ ನಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಪರಿಣಾಮ 34 ಮಂದಿ ಸಾವನ್ನಪ್ಪಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.