ಬೀಜಿಂಗ್: ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಬೆಂಬಲ ನೀಡುವ ಬಗ್ಗೆ ಖಚಿತಪಡಿಸಲು ಚೀನಾ ಕಳೆದ ಒಂದು ವಾರದಲ್ಲಿ ಎರಡನೇ ಬಾರಿ ನಿರಾಕರಿಸಿದೆ.
ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ಮೇಲೆ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಒಂದೊಮ್ಮೆ ಪಾಕಿಸ್ಥಾನದ ವಿರುದ್ಧ ಯುದ್ಧಕ್ಕೆ ಸಿದ್ಧವಾದರೆ, ಚೀನಾ ಪಾಕಿಸ್ಥಾನದ ನೆರವಿಗೆ ಧಾವಿಸಿ ಬರುವುದಾಗಿ ಪಾಕ್ ಮಾಧ್ಯಮಗಳು ಮಾಡಿದ್ದ ವರದಿಯನ್ನು ಚೀನಾ ಸ್ಪಷ್ಟವಾಗಿ ತಿರಸ್ಕರಿಸಿದೆ.
ಒಂದು ನೆರೆಯ ದೇಶವಾಗಿ ಮತ್ತು ಸ್ನೇಹಿತನಾಗಿ ಚೀನಾ ಮತ್ತೊಮ್ಮೆ ಕಾಶ್ಮೀರ ವಿಷಯ ಸೇರಿದಂತೆ ಇತರೆ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವಂತೆ ಮತ್ತು ಪ್ರಾದೇಶಿಕವಾಗಿ ಶಾಂತಿ ಕಾಯ್ದುಕೊಳ್ಳಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಲಿ ಎಂದು ಮನವಿ ಮಾಡಿದೆ.
"ಪಾಕ್ ವಿರುದ್ಧ ಭಾರತ ಯುದ್ಧ ಸಾರಿದರೆ ಇಸ್ಲಾಮಾಬಾದ್‌ಗೆ ಚೀನಾದ ಪೂರ್ಣ ಬೆಂಬಲವಿದೆ' ಎಂಬ ಪಾಕ್ ಮಾಧ್ಯಮಗಳ ವರದಿಯನ್ನು ಅಲ್ಲಗಳೆದಿರುವ ಚೀನಾ, ಈ ರೀತಿ ತಾನು ಹೇಳಿಕೆ ನೀಡಿರುವುದಾಗಿ ವರದಿಯಾಗಿರುವ ಯಾವುದೇ ಬಗೆಯ ಭರವಸೆಯನ್ನು ತಾನು ದೃಢೀಕರಿಸಲಾರೆ ಎಂದು ಸೋಮವಾರ ಹೇಳಿದೆ. ಇದರೊಂದಿಗೆ ಚೀನಾ ತನ್ನ ಸರ್ವಋತು ಮಿತ್ರನೆಂದು ತಿಳಿದುಕೊಂಡು ಬೀಗುತ್ತಿರುವ ಪಾಕಿಸ್ಥಾನಕ್ಕೆ ಬೀಜಿಂಗ್‌ನ ಈ ಸ್ಪಷ್ಟೀಕರಣದಿಂದ ಭಾರೀ ಹಿನ್ನಡೆ ಮತ್ತು ಮುಖಭಂಗವಾಗಿದೆ.
"ಪಾಕಿಸ್ಥಾನದ ಮೇಲೆ ವಿದೇಶೀ ಆಕ್ರಮಣ ನಡೆದಲ್ಲಿ ಚೀನಾ ಪಾಕಿಸ್ಥಾನಕ್ಕೆ ಪೂರ್ಣ ಬೆಂಬಲ ನೀಡುವುದೆಂದು ತಾನು ಹೇಳಿರುವುದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ, ಆದರೆ ಆ ರೀತಿ ನಾನು ನೀಡಿದ್ದೇನೆಂಬ ಹೇಳಿಕೆಯ ಬಗ್ಗೆ ನನಗೇನೂ ಗೊತ್ತಿಲ್ಲ' ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಯೂ ಬೊರೆನ್ ಅವರು ಹೇಳಿದ್ದಾರೆ.
ಪಾಕಿಸ್ಥಾನದ ಪಂಜಾಬ್ ಮುಖ್ಯಮಂತ್ರಿ ಶಹಬಾಜ್ ಷರೀಫ್ ಅವರ ಕಾರ್ಯಾಲಯವು ಹೊರಡಿಸಿದ್ದ ಪತ್ರಿಕಾ ಹೇಳಿಕೆಯನ್ನು ಉಲ್ಲೇಖೀಸಿ ಪಾಕಿಸ್ಥಾನದ ಡಾನ್ ಪತ್ರಿಕೆ ವರದಿ ಮಾಡಿತ್ತು. ಅದರಲ್ಲಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು "ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ನಾವು ಪಾಕಿಸ್ಥಾನದ ಪರ ಇದ್ದೇವೆ ಮತ್ತು ಮುಂದೆಯೂ ಇರುತ್ತೇವೆ ಎಂದು ಹೇಳಿರುವುದಾಗಿ ಉಲ್ಲೇಖೀಸಲಾಗಿತ್ತು.
ಕಳೆದ ವಾರ ಚೀನಾ ಪ್ರಧಾನಿ ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಮಹಾಅಧಿವೇಶನದ ವೇಳೆ ತಮ್ಮನ್ನು ಭೇಟಿ ಮಾಡಿದ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೂ ಕಾಶ್ಮೀರ ವಿಚಾರದಲ್ಲಿ ಬೆಂಬಲ ನೀಡುವ ಬಗ್ಗೆ ಯಾವುದೇ ಭರವಸೆ ನೀಡಲು ನಿರಾಕರಿಸಿದ್ದರು.