ಇಸ್ಲಾಮಾಬಾದ್: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿರುವ ಪಾಕಿಸ್ತಾನದ ನಿರ್ಧಾರ "ಅಭೂತಪೂರ್ವ" ಎಂದಿರುವ ಪಾಕ್ ಮಾಧ್ಯಮ, ಅದರ ನಂತರದ ಪರಿಣಾಮ ಎದುರಿಸಲು ಸಿದ್ಧರಾಗಿ ಎಂದು ಸಲಹೆ ನೀಡಿವೆ.
ಬಲಪಂಥಿಯ ಇಂಗ್ಲಿಷ್ ದಿನ ಪತ್ರಿಕೆ ದಿ ನೇಷನ್ ತನ್ನ ಮುಖಪುಟದಲ್ಲಿ 'ಗೂಢಚಾರಿಗೆ ಗಲ್ಲು, ಹೆಚ್ಚಿದ ಆತಂಕ' ಎಂಬ ಹೆಡ್ ಲೈನ್ ಕೊಡುವ ಮೂಲಕ ಎರಡು ಪರಮಾಣು ರಾಷ್ಟ್ರಗಳ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದೆ.
ಜಾಧವ್ ಗಲ್ಲು ಶಿಕ್ಷೆಯಿಂದಾಗಿ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತು ಹೆಚ್ಚಿಸಿದೆ ಎಂದು ರಕ್ಷಣಾ ವಿಶ್ಲೇಷಕ ಡಾ.ಹಸನ್ ಅಸ್ಕರಿ ಅವರು ಹೇಳಿರುವುದಾಗಿ ದಿ ನೇಷನ್ ವರದಿ ಮಾಡಿದೆ.
ಇನ್ನು ಸ್ವಯಂ ತಪ್ಪೊಪ್ಪಿಕೊಂಡ ಭಾರತೀಯ ಗೂಢಚಾರಿಗೆ ಗಲ್ಲು ಶಿಕ್ಷೆ ವಿಧಿಸಿರುವ ಪಾಕಿಸ್ತಾನ ಸೇನೆಯ ನಿರ್ಧಾರ ಅಭೂತಪೂರ್ವ ಎಂದು ದಿ ಎಕ್ಸ್ ಪ್ರೆಸ್ ಟ್ರಿಬ್ಯುನ್ ಬಣ್ಣಿಸಿದೆ. ಅಲ್ಲದೆ ಈ ನಿರ್ಧಾರದಿಂದಾಗಿ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಪಾಕಿಸ್ತಾನದ ಈ ನಿರ್ಧಾರ 'ಅಪರೂಪದ ಬೆಳವಣಿಗೆ' ಎಂದಿರುವ ಡಾನ್ ದಿನ ಪತ್ರಿಕೆ, ಈಗಾಗಲೇ ಭಾರತ-ಪಾಕಿಸ್ತಾನ ಸಂಬಂಧ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ನಾಗರಿಕನಿಗೆ ಗಲ್ಲು ಶಿಕ್ಷೆ ಪ್ರಕಟಿಸಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ ಎಂದು ವರದಿ ಮಾಡಿದೆ.
ಕುಲಭೂಷಣ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿರುವ ಪಾಕಿಸ್ತಾನದ ನಿರ್ಧಾರವನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಇದೊಂದು ಪೂರ್ವ ಯೋಜಿತ ಕೊಲೆ ಎಂದಿದೆ. ಅಲ್ಲದೆ ಜಾಧವ್ ಗಲ್ಲು ಶಿಕ್ಷೆ ಜಾರಿಗೊಳಿಸಿದರೆ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಇಸ್ಲಾಮಾಬಾದ್ ಅರಿತುಕೊಳ್ಳಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.