ಧಾರ್ಮಿಕ ಗುರು ದಲೈ ಲಾಮಾ (ಸಂಗ್ರಹ ಚಿತ್ರ)
ಬೀಜಿಂಗ್: ಅರುಣಾಚಲ ಪ್ರದೇಶದ ಜನರು ಭಾರತದ ಕಾನೂನುಬಾಹಿರ ಆಡಳಿತದಿಂದ ಕಷ್ಟದಲ್ಲಿ ಜೀವನ ನಡೆಸುತ್ತಿದ್ದು ಅವರು ಚೀನಾಕ್ಕೆ ಮರಳಲು ಇಚ್ಛಿಸುತ್ತಿದ್ದಾರೆ ಎಂದು ಚೀನಾದ ಮಾಧ್ಯಮ ವರದಿ ಮಾಡಿದೆ. ಅಲ್ಲದೆ ಧಾರ್ಮಿಕ ಗುರು ದಲೈಲಾಮಾ ಅವರಿಗೆ ಗಡಿನಾಡು ರಾಜ್ಯಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಟ್ಟ ಭಾರತ ಸರ್ಕಾರವನ್ನು ಅದು ಟೀಕಿಸಿದೆ.
ಅರುಣಾಚಲ ಪ್ರದೇಶಕ್ಕೆ ದಲೈ ಲಾಮಾ ಭೇಟಿ ನೀಡಿರುವುದನ್ನು ಅದರಲ್ಲೂ ತವಂಗ್ ಗೆ ಹೋಗಿದ್ದನ್ನು ಚೀನಾ ವಿರೋಧಿಸಿತ್ತು. ತವಂಗ್ ನ್ನು ಚೀನಾ ದಕ್ಷಿಣ ಟಿಬೆಟ್ ಎಂದೇ ಪರಿಗಣಿಸಿದೆ. ಇಲ್ಲಿಗೆ ಭೇಟಿ ಕೊಡುವುದನ್ನು ಚೀನಾದ ವಿದೇಶಾಂಗ ಸಚಿವಾಲಯ ಮತ್ತು ಮಾಧ್ಯಮ ವಿರೋಧಿಸುತ್ತಿರುವ ಸುದ್ದಿಯನ್ನು ಪದೇ ಪದೇ ಬಿತ್ತರಿಸಲಾಗುತ್ತಿತ್ತು.
ಭಾರತದ ಕಾನೂನುಬಾಹಿರ ನೀತಿಯಿಂದಾಗಿ ದಕ್ಷಿಣ ಟಿಬೆಟ್ ನ ನಿವಾಸಿಗಳು ಕಷ್ಟದ ಜೀವನ ನಡೆಸುತ್ತಿದ್ದಾರೆ. ಹಲವು ತಾರತಮ್ಯಗಳನ್ನು ಎದುರಿಸುತ್ತಿದ್ದು ಚೀನಾಕ್ಕೆ ಹಿಂತಿರುಗಲು ಬಯಸುತ್ತಿದ್ದಾರೆ ಎಂಬ ಚೀನಾದ ದಿನ ಪತ್ರಿಕೆ ಪ್ರಚೋದನಾಕಾರಿ ಲೇಖನ ಬರೆದಿದೆ.
ಈ ಲೇಖನಕ್ಕೆ ಟಿಬೆಟ್ ನಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾಗಿದ್ದು, ಚೀನಾ ಸರ್ಕಾರದ ವಿರುದ್ಧ 120ಕ್ಕೂ ಅಧಿಕ ಮಂದಿ ಟಿಬೆಟಿಯನ್ನರು ಆತ್ಮಾಹುತಿ ಮಾಡಿಕೊಂಡಿದ್ದಾರೆ.
ದಲೈಲಾಮಾ ಅವರ ಅರುಣಾಚಲ ಪ್ರದೇಶ ಭೇಟಿ ಆತ್ಮವಂಚನೆಯಾಗಿದೆ. ಅವರ ದೇಶ, ಅಲ್ಲಿನ ಜನತೆ ಮತ್ತು ಪ್ರಾಂತೀಯ ಶಾಂತಿಗೆ ಧಕ್ಕೆ ತರುತ್ತಿದ್ದಾರೆ ಎಂದು ಲೇಖನದಲ್ಲಿ ಟೀಕಿಸಲಾಗಿದೆ.
ದಲೈ ಲಾಮಾ ಅವರು 9 ದಿನಗಳ ಭೇಟಿಗಾಗಿ ಅರುಣಾಚಲ ಪ್ರದೇಶಕ್ಕೆ ಆಗಮಿಸಿದ್ದಾರೆ. 2009ರಲ್ಲಿ ಕೂಡ ಅವರು ಇಲ್ಲಿಗೆ ಭೇಟಿ ನೀಡಿದ್ದರು. ಆಗ ಕೂಡ ಅವರ ಭೇಟಿಯನ್ನು ಚೀನಾ ಸರ್ಕಾರ ವಿರೋಧಿಸಿತ್ತು.
ದಲೈ ಲಾಮಾ ಅವರ ಭಾರತ ಭೇಟಿ ವಿರುದ್ಧ ಚೀನಾ ರಾಜತಾಂತ್ರಿಕ ಪ್ರತಿಭಟನೆ ನಡೆಸುತ್ತಿದ್ದು ಚೀನಾದ ಮಾಧ್ಯಮಗಳಲ್ಲಿ ಈಗಾಗಲೇ ನೂರಾರು ಲೇಖನಗಳು ಮತ್ತು ಸಂಪಾದಕೀಯಗಳು ಅವರ ವಿರುದ್ಧವಾಗಿ ವರದಿ ಮಾಡಿವೆ.