ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಭಾರತೀಯ ಐಟಿ ಉದ್ಯೋಗಿಗಳ ಅಮೆರಿಕ ಕನಸಿಗೆ ರಹದಾರಿಯಾಗಿರುವ, ಬಹುಬೇಡಿಕೆಯ ಹೆಚ್1-ಬಿ ವೀಸಾಕ್ಕೆ ಕಡಿವಾಣ ಹಾಕುವ ಕಾರ್ಯಕಾರಿ ಆದೇಶವೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಸಹಿ ಹಾಕಿದ್ದಾರೆ.
ಟ್ರಂಪ್ ಕಠಿಣ ನಿರ್ಣಯದಿಂದಾಗಿ ಭಾರತೀಯರು ಸೇರಿ ವಿದೇಶಿಯರಿಗೆ ಹೆಚ್1-ಬಿ ವೀಸಾ ದುರ್ಲಭವಾಗುವ ಸಂಭವವಿದೆ. ಅಮೆರಿಕನ್ನರಿಗೆ ಉದ್ಯೋಗ ದೊರಕಿಸಿಕೊಡುವ ಉದ್ದೇಶದೊಂದಿಗೆ ಟ್ರಂಪ್ ಅವರು ಈ ಕ್ರಮವನ್ನು ಕೈಗೊಂಡಿದ್ದಾರೆ.
ಅಮೆರಿಕ ಸಂಸತ್ತಿನ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಸ್ಪೀಕರ್ ಪಾಲ್ ರ್ಯಾನ್ ಅವರ ತವರು ರಾಜ್ಯ ವಿಸ್ಕಾನ್ಸಿನ್ ನಲ್ಲಿರುವ ಮಿಲ್ವೌಕಿಗೆ ತೆರಳಿದ ಟ್ರಂಪ್ ಅವರು 'ಅಮೆರಿಕಾದ ವಸ್ತುಗಳನ್ನೇ ಕೊಳ್ಳಿ, ಅಮೆರಿಕನ್ನರನ್ನೇ ನೇಮಿಸಿ' ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ.
ಅಧ್ಯಾದೇಶಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿರುವ ಟ್ರಂಪ್ ಅವರು, ಅಮೆರಿಕನ್ನದ ಉದ್ಯೋಗಗಳನ್ನುವಿದೇಶಿಗರು ಕಸಿದುಕೊಳ್ಳುವುದಕ್ಕೆ ಕಡಿವಾಣ ಹಾಕುವ ಸಲುವಾಗಿ ಈ ಆದೇಶವನ್ನು ಹೊರಡಿಸಲಾಗಿದೆ. ಅಮೆರಿಕನ್ನರು ಅಮೆರಿಕ ವಸ್ತುಗಳನ್ನೇ ಖರೀದಿಸಲು ಪ್ರೋತ್ಸಾಹವನ್ನು ನೀಡುವ ಅಂಶವನ್ನು ಈ ಆದೇಶ ಹೊಂದಿದೆ. ಹೊಸ ಆದೇಶ ಅಮೆರಿಕ ಟೆಕ್ನಾಲಜಿ ಕಂಪನಿಗಳು ಮಾಡಿಕೊಳ್ಳುತ್ತಿದ್ದ ವೀಸಾ ದುರ್ಬಳಕೆಗೆ ಕಡಿವಾಣ ಹಾಕಲಿದೆ. ನಮ್ಮ ಉದ್ಯೋಗಿಗಳನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ. ನಮ್ಮ ಉದ್ಯೋಗವನ್ನು ರಕ್ಷಿಸಿಕೊಂಡು ಮೊದಲು ಅಮೆರಿಕನ್ನರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಟ್ರಂಪ್ ಹೊರಡಿಸಿರುವ ಕಾರ್ಯಕಾರಿ ಆದೇಶದಿಂದಾಗಿ ಕೆಳ ಹಂತದ ನೌಕರರ ಬದಲಾಗಿ ಅತ್ಯಂತ ನುರಿತ ಅಥವಾ ಅತೀ ಹೆಚ್ಚು ವೇತನ ಪಡೆಯುವ ವಿದೇಶಿ ನೌಕರರಿಗೆ ಮಾತ್ರವೇ ಹೆಚ್1-ಬಿ ವೀಸಾ ದೊರೆಯಲಿದೆ.