ರಸ್ತೆ ನಿರ್ಮಾಣ ಮಾಡುವುದರ ಬಗ್ಗೆ ಭಾರತಕ್ಕೆ ಮುಂಚೆಯೇ ತಿಳಿಸಿದ್ದೆವು: ಚೀನಾ
ಸಿಕ್ಕಿಂ ನ ಡೊಕ್ಲಾಮ್ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದರ ಬಗ್ಗೆ ಭಾರತಕ್ಕೆ ಮೊದಲೇ ಮಾಹಿತಿ ನೀಡಿದ್ದೆವು ಎಂದು ಚೀನಾ ಹೇಳಿದೆ.
ಬೀಜಿಂಗ್: ಸಿಕ್ಕಿಂ ನ ಡೊಕ್ಲಾಮ್ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದರ ಬಗ್ಗೆ ಭಾರತಕ್ಕೆ ಮೊದಲೇ ಮಾಹಿತಿ ನೀಡಿದ್ದೆವು ಎಂದು ಚೀನಾ ಹೇಳಿದೆ.
ಚೀನಾ-ಭಾರತದ ಗಡಿಗೆ ಸಂಬಂಧಿಸಿದ ಡಾಕ್ಯುಮೆಂಟ್ ಒಂದರಲ್ಲಿ ಈ ಬಗ್ಗೆ ಉಲ್ಲೇಖಿಸಿರುವ ಚೀನಾ, ಡೋಕ್ಲಾಮ್ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುವುದರ ಬಗ್ಗೆ ಭಾರತಕ್ಕೆ ಮೊದಲೇ ಮಾಹಿತಿ ನೀಡಿದ್ದೆವು ಎಂದು ಹೇಳಿದೆ. ಇದೇ ವೇಳೆ ಭಾರತ ಡೊಕ್ಲಾಮ್ ಪ್ರದೇಶದಲ್ಲಿ ನಿಯೋಜಿಸಿರುವ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಚೀನಾ ಆಗ್ರಹಿಸಿದೆ.
ಗಡಿ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವುದಕ್ಕೆ ಚೀನಾ ಅಡ್ಡಿ ಉಂಟು ಮಾಡುತ್ತಿದೆ ಎಂಬ ಭಾರತದ ಆರೋಪವನ್ನು ತಳ್ಳಿಹಾಕಿರುವ ಚೀನಾ, ಗಡಿಯಲ್ಲಿ ಸೇನಾ ಪಡೆಯನ್ನು ನಿಯೋಜಿಸುವ ಮೂಲಕ ಭಾರತವೇ ಅಂತಹ ಕೃತ್ಯಕ್ಕೆ ಕೈಹಾಕಿದೆ ಆದರೆ ಚೀನಾ ಗಡಿಯಲ್ಲಿ ಯಥಸ್ಥಿತಿ ಕಾಯ್ದುಕೊಳ್ಳುವುದಕ್ಕೆ ಅಡ್ಡಿ ಉಂಟು ಮಾಡಿಲ್ಲ ಎಂದು ಸಮರ್ಥನೆ ನೀಡಿದೆ. ಇದೇ ವೇಳೆ ತ್ರಿವಳಿ ಗಡಿ ಬಿಂದುವಿನಲ್ಲಿ ರಸ್ತೆ ನಿರ್ಮಿಸುವುದು ಭದ್ರತೆಯ ಮೇಲೆ ಪರಿಣಾಮ ಬೀರಲಿದೆ ಎಂಬ ಭಾರತದ ಅಭಿಪ್ರಾಯವನ್ನೂ ಚೀನಾ ತಿರಸ್ಕರಿಸಿದೆ.