ನವದೆಹಲಿ: ಭಾರತ ಮತ್ತು ಚೀನಾ ದೇಶಗಳ ನಡುವೆ ಶೀಥಲ ಸಮರಕ್ಕೆ ಕಾರಣವಾಗಿರುವ ಡೊಕ್ಲಾಂ ಗಡಿ ಬಿಕ್ಕಟ್ಟು ತಾರಕಕ್ಕೇರಿದ್ದು, ಗಡಿ ಗ್ರಾಮದ ನಿವಾಸಿಗಳನ್ನು ಭಾರತೀಯ ಸೇನೆ ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಗೊಳಿಸಿದೆ ಎಂಬ ಮಾಧ್ಯಮಗಳ ವರದಿಯನ್ನು ಸೇನೆ ತಳ್ಳಿ ಹಾಕಿದೆ.
ವಿವಾದಿತ ಸಿಕ್ಕಿಂ ಗಡಿಯಲ್ಲಿ ಗ್ರಾಮದ ನಿವಾಸಿಗಳನ್ನು ಸ್ಥಳಾಂತರ ಮಾಡುವಷ್ಟರ ಮಟ್ಟಿಗೆ ಪರಿಸ್ಥಿತಿ ಉಲ್ಬಣವಾಗಿಲ್ಲ. ಭಾರತೀಯ ಸೇನೆ ಗ್ರಾಮಸ್ಥರು ತಮ್ಮ ತಮ್ಮ ಸ್ಥಳ ತೆರವು ಮಾಡುವಂತೆ ಯಾವುದೇ ರೀತಿಯ ಆದೇಶ ನೀಡಿಲ್ಲ ಎಂದು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ನಿನ್ನೆಯಷ್ಟೇ ಕೆಲ ಮಾಧ್ಯಮಗಳು ಸಿಕ್ಕಿಂ-ಭೂತಾನ್-ಟಿಬೆಟ್ ಗಡಿಯಲ್ಲಿ ಚೀನಾ ಮತ್ತು ಭಾರತ ದೇಶಗಳ ಸೈನಿಕರ ಜಮಾವಣೆ ಹೆಚ್ಚಾಗಿದ್ದು, ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಗೊಳಿಸಲಾಗುತ್ತಿದೆ ಎಂದು ವರದಿ ಮಾಡಲಾಗಿತ್ತು.
ಇದೀಗ ಆ ವರದಿಗಳು ಸುಳ್ಳು ಎಂದು ಸೇನೆ ಸ್ಪಷ್ಟಪಡಿಸಿದ್ದು, ಸೇನಾಧಿಕಾರಿಗಳು ಅಂತಹ ಯಾವುದೇ ಆದೇಶ ನೀಡಿಲ್ಲ. ಅಂತೆಯೇ ಗಡಿಯಲ್ಲಿ ಅಂತಹ ಗಂಭೀರ ಪರಿಸ್ಥಿತಿ ಕೂಡ ನಿರ್ಮಾಣವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚೀನಾ ಗಡಿಯಲ್ಲಿ ಈ ಹಿಂದಿಗಿಂತ ಕೊಂಚ ಸೈನಿಕರ ಚಟುವಟಿಕೆ ಹೆಚ್ಚಾಗಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆರ್ಟಿಲರಿ ಗನ್ ಗಳು, ಏರ್ ಡಿಫೆನ್ಸ್ ವ್ಯವಸ್ಥೆ, ಟ್ಯಾಂಕರ್ ಗಳ ಜಮಾವಣೆಯನ್ನು ನಾವು ಗಮನಿಸಿದ್ದೇವೆ. ಆದರೆ ಇವೆಲ್ಲವೂ ತೀರಾ ಗಂಭೀರ ವಿಚಾರಗಳಲ್ಲ. ನಮ್ಮಲ್ಲೂ ಕೂಡ ಗಡಿಯಲ್ಲಿ ಸೈನಿಕರ ಜಮಾವಣೆ, ಯುದ್ಧೋಪಕರಣಗಳ ನಿಯೋಜನೆ ಸಾಮಾನ್ಯವಾಗಿರುತ್ತದೆ. ಆದರೆ ಇದು ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಸ್ತುತ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸ್ಥಳೀಯರನ್ನು ತೆರವುಗೊಳಿಸುವ ಯಾವುದೇ ರೀತಿಯ ಆದೇಶವನ್ನು ಸೇನೆ ನೀಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.