ಇಸ್ಲಾಮಾಬಾದ್: 'ಹಿಜ್ಬುಲ್ ಮುಜಾಹಿದ್ದೀನ್' ಅನ್ನು 'ವಿದೇಶಿ ಭಯೋತ್ಪಾದನಾ ಸಂಘಟನೆ' ಎಂದು ಘೋಷಿಸಿರುವ ಅಮೆರಿಕ ನಡೆ ಅಸಮರ್ಥನೀಯವಾದದ್ದು ಎಂದು ಪಾಕಿಸ್ತಾನ ಶುಕ್ರವಾರ ಹೇಳಿಕೊಂಡಿದೆ.
ನಿನ್ನೆಯಷ್ಟೇ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಪ್ರಚೋದಿಸುತ್ತಿರುವ ಉಗ್ರ ಸಂಘಟನೆ 'ಹಿಜ್ಬುಲ್ ಮುಜಾಹಿದ್ದೀನ್' ಅನ್ನು 'ವಿದೇಶಿ ಭಯೋತ್ಪಾದನಾ ಸಂಘಟನೆ' ಎಂದು ಅಮೆರಿಕ ಘೋಷಿಣೆ ಮಾಡಿದ್ದು, ಇತ್ತೀಚಿನ ಕೆಲ ತಿಂಗಳುಗಳಿಂದ ಹಿಜ್ಬುಲ್ ಸಂಘಟನೆ ಕಾಶ್ಮೀರದಲ್ಲಿ ಸರಣಿ ಭಯೋತ್ಪಾದಕ ಕೃತ್ಯಗಳನ್ನು ಎಸಗುತ್ತಿರುವ ಹಿನ್ನಲೆಯಲ್ಲಿ ಅಮೆರಿಕಾವು ಹಿಜ್ಬುಲ್ ಮುಜಾಹಿದ್ದೀನ್ ನನ್ನು ಉಗ್ರ ಪಟ್ಟಿಗೆ ಸೇರ್ಪಡೆಗೊಳಿಸಿತ್ತು. ಈ ಸಂಘಟನೆಯೊಂದಿಗೆ ಯಾವುದೇ ಕಾರಣಕ್ಕೂ ಯಾವ ರೀತಿಯ ಒಪ್ಪಂಗಳನ್ನು ಅಮೆರಿಕಾದ ನಾಗರಿಕರು ಕೈಗೊಳ್ಳಬಾರದು ಎಂದು ಸರ್ಕಾರಿ ಪ್ರಕಟಣೆಯಲ್ಲಿ ಆದೇಶ ಹೊರಡಿಸಿತ್ತು.
ಅಮೆರಿಕ ಈ ನಡೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ನಫೀಜ್ ಝಕಾರಿಯಾ ಅವರು, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯನ್ನು ವಿದೇಶಿ ಉಗ್ರ ಸಂಘಟನೆಯೆಂದು ಅಮೆರಿಕ ಘೋಷಣೆ ಮಾಡಿರುವುದು ಸರಿಯಲ್ಲ. ಕಾಶ್ಮೀರಿಗರ 70 ವರ್ಷಗಳ ಶ್ರಮವನ್ನು ಪರಿಗಣಿಸಿ ಅಮೆರಿಕ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಕಾಶ್ಮೀರ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿರುವುದು ನಮಗೆ ಬೇಸರವನ್ನು ತಂದಿದೆ. ಕಾಶ್ಮೀರಿಗರ ಹೋರಾಟಕ್ಕೆ ನೈತಿಕ, ರಾಜತಾಂತ್ರಿಕ ಹಾಗೂ ರಾಜಕೀಯ ಬೆಂಬಲವನ್ನು ಪಾಕಿಸ್ತಾನ ನೀಡಲಿದೆ ಎಂದು ತಿಳಿಸಿದ್ದಾರೆ.