ಬೀಜಿಂಗ್: ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಹಾದು ಹೋಗುವ 50 ಬಿಲಿಯನ್ ಡಾಲರ್ ಮೊತ್ತದ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದರಿಂದ ಚೀನಾ ಯೋಜನೆಯ ಅನುದಾವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಈ ವರದಿಯಿಂದ ಪಾಕಿಸ್ತಾನ ದಿಗ್ಭ್ರಾಂತಗೊಂಡಿದೆ.
ಚೀನಾ ಸರ್ಕಾರವು ಪಾಕಿಸ್ತಾನದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಒಂದು ಟ್ರಿಲಿಯನ್ ಮೊತ್ತದ ರಸ್ತೆ ಯೋಜನೆಗಳಿಗೆ ಬಂಡವಾಳ ಹೂಡಿತ್ತು. ಇದೀಗ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಅನುದಾನ ನಿಲ್ಲಿಸಿದರೇ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆ ವಿಳಂಬವಾಗಲಿದೆ ಎಂದು ಪಾಕಿಸ್ತಾನ ಡಾನ್ ಪತ್ರಿಕೆ ವರದಿ ಮಾಡಿದೆ.
ಸದ್ಯ ಚೀನಾ ತಾತ್ಕಾಲಿಕವಾಗಿ ಅನುದಾನ ನಿಲ್ಲಿಸಿರುವುದರಿಂದ 210 ಕಿ.ಮೀ ಉದ್ದದ ರಸ್ತೆ ಯೋಜನೆಗೆ ಹೊಡೆತ ಬೀಳಲಿದೆ. ರು. 81 ಬಿಲಿಯನ್ ಯೋಜನೆ ಇದಾಗಿದ್ದು ರು. 66 ಬಿಲಿಯನ್ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಬಳಕೆ ಹಾಗೂ ರು. 15 ಬಿಲಿಯನ್ ಭೂ ಸ್ವಾಧೀನ ಪ್ರಕ್ರಿಯೆಗೆ ಬಳಸಲಾಗುತ್ತದೆ.
ಮತ್ತೊಂದು ಯೋಜನೆ 110 ಕಿ.ಮೀ ಉದ್ದದ ಖುಸ್ದಾರ್-ಬಸೀಮಾ ರಸ್ತೆ ಅಂದಾಜು ರು. 19.76 ಬಿಲಿಯನ್ ಹಾಗೂ ಮೂರನೇ ಯೋಜನೆ ರು. 8.5 ಬಿಲಿಯನ್ ಅಂದಾಜು ವೆಚ್ಚದಲ್ಲಿ 136 ಕಿ.ಮೀ ಉದ್ದದ ಕರಕರೂಂ ರಾಷ್ಟ್ರೀಯ ಹೆದ್ದಾರಿ ಈ ಯೋಜನೆಯ ಕಾಮಗಾರಿಗಳು ವಿಳಂಬವಾಗಲಿವೆ.