ಪತ್ನಿ ಹಾಗೂ ತಾಯಿಯನ್ನು ಗಾಜಿನ ಪರದೆ ಮೂಲಕ ನೋಡುತ್ತಿರುವ ಕುಲ್'ಭೂಷಣ್ ಜಾಧವ್
ನವದೆಹಲಿ: ಭಾರತದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಜಾಧವ್ ಕುಟುಂಬಸ್ಥರೊಂದಿಗೆ ಪಾಕಿಸ್ತಾನದ ಅಧಿಕಾರಿಗಳು ಅಮಾನವೀಯವಾಗಿ ನಡೆದುಕೊಂಡಿದ್ದರ ಹಿಂದೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಕೈವಾಡವಿತ್ತು ಎಂದು 26/11 ಮುಂಬೈ ಉಗ್ರರ ದಾಳಿಯ ಮಾಸ್ಟರ್'ಮೈಂಡ್ ಹಫೀಜ್ ಸಯೀದ್ ಆಪ್ತ ಭಾನುವಾರ ಹೇಳಿದ್ದಾನೆ.
ಜಾಧವ್ ಪ್ರಕರಣ ಕುರಿತಂತೆ ಪಾಕಿಸ್ತಾನದ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಹಫೀಜ್ ಆಪ್ತ ಮೌಲಾನಾ ಅಮೀರ್ ಹಮ್ಜಾ, ಜಾಧವ್ ಪತ್ನಿ ಹಾಗೂ ತಾಯಿಯೊಂದಿಗೆ ಪಾಕಿಸ್ತಾನಗ ಗುಚ್ತಚರ ಸಂಸ್ಥೆಯ ಅಧಿಕಾರಿಗಳು ಹಾಗೂ ಪಾಕಿಸ್ತಾನ ಸರ್ಕಾರ ಅಮಾನವೀಯವಾಗಿ ನಡೆದುಕೊಂಡಿತ್ತು. ಜಾಧವ್'ನನ್ನು ಭೇಟಿ ಮಾಡಲು ಆತನ ಪತ್ನಿ ಹಾಗೂ ತಾಯಿಗೆ ಅವಕಾಶ ನೀಡುವಂತೆ ಭಾರತ ಮನವಿ ಮಾಡಿಕೊಂಡಿತ್ತು. ಮನವಿಗೆ ದಯೆ ತೋರಿದ್ದ ಪಾಕಿಸ್ತಾನ ಜಾಧವ್ ಪತ್ನಿ ಹಾಗೂ ತಾಯಿಗೆ ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಪಾಕಿಸ್ತಾನ ಒಪ್ಪಿಗೆ ಸೂಚಿಸಿದ್ದಾಗ ಭಾರತ ಸೋಫಾ ಹಾಕಿ ಜಾಧವ್ ಜೊತೆಗೆ ಆತನ ಕುಟುಂಬಸ್ಥರು ಮಾತನಾಡಲು ಅವಕಾಶ ಮಾಡಿಕೊಡುತ್ತದೆ ಎಂದುಕೊಂಡಿತ್ತು. ಆದರೆ, ಪಾಕಿಸ್ತಾನದ ಐಎಸ್ಐ ಅದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ ಎಂದು ಹೇಳಿದ್ದಾನೆ.
ಇದಲ್ಲದೆ, ಜಾಧವ್ ನನ್ನು ಭೇಟಿ ಮಾಡಲು ಬಂದಾಗ ಆತನ ಪತ್ನಿಯ ಶೂ ಒಳಗೆ ರಹಸ್ಯ ವಸ್ತುಗಳನ್ನು ಇಟ್ಟಿರುವ ಬಗ್ಗೆ ಐಎಸ್ಐ ಶಂಕಿಸಿತ್ತು. ಜಾಧವ್ ಪತ್ನಿ ಇಸ್ಲಾಮಾಬಾದ್ ತಲುಪುತ್ತಿದ್ದಂತೆಯೇ ಅಧಿಕಾರಿಗಳು ಆ ವಸ್ತುವನ್ನು ತೆಗೆದಿದ್ದರು. ಬಳಿಕ ಬಟ್ಟೆ ಬದಲಿಸುವಂತೆ ಸೂಚಿಸಲಾಗಿತ್ತು, ಅಲ್ಲದೆ, ಹಣೆಯಲ್ಲಿದ್ದ ಸಿಂಧೂರ, ಮಂಗಳಸೂತ್ರ ಹಾಗೂ ತಲೆ ಪಿನ್ ಗಳನ್ನು ತೆಗೆಯುವಂತೆಯೂ ಸೂಚಿಸಿದ್ದರು ಎಂದು ಹೇಳಿಕೊಂಡಿದ್ದಾನೆ.
ಸಾಕಷ್ಟು ಬೆಳವಣಿಗೆ ಹಾಗೂ ವಿವಾದಗಳ ಬಳಿ ಪಾಕಿಸ್ತಾನ ಕೊನೆಗೂ ಜಾಧವ್ ಪತ್ನಿ ಚೇತಾಂಕುಲ್ ಹಾಗೂ ತಾಯಿ ಅವಾಂತಿಯವರಿಗೆ ಜಾಧವ್ ಅವರನ್ನು ಭೇಟಿಯಾಗಲು ಅವಕಾಶ ನೀಡಿತ್ತು. ಇದರಂತೆ ಕುಲಭೂಷಣ್ ಜಾಧವ್ ಅವರು ಡಿ.25 ರಂದು ಗಾಜಿನ ತಡೆಗೋಡೆ ಮಧ್ಯೆ ತಮ್ಮ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಇಸ್ಲಾಮಾಬಾದ್ನಲ್ಲಿರುವ ಪಾಕ್ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ಭೇಟಿಗೆ ವ್ಯವಸ್ಥೆ ಮಾಡಲಾಗಿತ್ತು. ಇದರಂತೆ ಡಿ.25ರ ಮಧ್ಯಾಹ್ನ 1.35ಕ್ಕೆ ಭೇಟಿಗೆ ಅವಕಾಶ ಮಾಡಿಕೊಡಲಾಯಿತು. ಸುಮಾರು 30 ನಿಮಿಷಗಳ ಕಾಲ ಜಾಧವ್, ತಾಯಿ ಮತ್ತು ಪತ್ನಿ ಜೊತೆ ಮಾತುಕತೆ ನಡೆಸಿದ್ದರು.
ಭೇಟಿ ವೇಳೆ ಕುಲಭೂಷಣ್ ಜಾಧವ್ ಅವರ ತಾಯಿ ಹಾಗೂ ಪತ್ನಿಯೊಂದಿಗೆ ಅಮಾನವೀಯವಾಗಿ ನಡೆದುಕೊಂಡಿದ್ದ ಪಾಕಿಸ್ತಾನ, ತಮ್ಮ ಪುತ್ರನನ್ನು ಭೇಟಿ ಮಾಡಲು ಹೋಗಿದ್ದ ತಾಯಿಯೊಂದಿಗೆ ಮಾತೃಭಾಷಣೆಯಲ್ಲಿ ಮಾತನಾಡಲು ಪಾಕ್ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದರು. ಅಲ್ಲದೆ, ಭೇಟಿಗೂ ಮುನ್ನ ಜಾಧವ್ ಪತ್ನಿ ಅವರ ಬಿಂದಿ, ಮಂಗಳಸೂತ್ರ, ಚಪ್ಪಲಿಗಳನ್ನು ತೆಗೆಸಿದ್ದರು. ಮರಳಿ ತೆರಳುವ ವೇಳಯೂ ಜಾಧವ್ ಪತ್ನಿ ಪಾದರಕ್ಷೆಗಳನ್ನು ವಾಪಸ್ ನೀಡುವಂತೆ ಕೇಳಿದರೂ ವಾಪಸ್ ನೀಡಿರಲಿಲ್ಲ.