ವಾಷಿಂಗ್ಟನ್: ಭಾರತೀಯ ಮೂಲದ ಇಂಜಿನಿಯರ್ ವ್ಯಕ್ತಿಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಅಮೆರಿಕದ ಕಾನ್ಸಾಸ್'ನಲ್ಲಿ ಶುಕ್ರವಾರ ನಡೆದಿದೆ.
ಶ್ರೀನಿವಾಸ್ ಶ್ರೀನಿವಾಸ್ ಕುಚಿಬೋಟ್ಲ (32) ಹತ್ಯೆಯಾದ ಭಾರತೀಯ ವ್ಯಕ್ತಿಯಾಗಿದ್ದು, ಹತ್ಯೆ ಹಿಂದಿರುವ ಪ್ರಮುಖ ಕಾರಣಗಳು ಈ ವರೆಗೂ ತಿಳಿದುಬಂದಿಲ್ಲ. ದ್ವೇಷದ ಹಿನ್ನಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಕನ್ಸಾಸ್ ನ ಒಲಾತೆ ಎಂಬಲ್ಲಿ ಬಾರೊಂದರಲ್ಲಿ ಭಾರತೀಯ ಮೇಲೆ ದಾಳಿ ನಡೆಸಲಾಗಿದೆ. 'ನಮ್ಮ ದೇಶವನ್ನು ಬಿಟ್ಟು ತೊಲಗಿ' ಎಂದು ಕೂಗಿರುವ ದುಷ್ಕರ್ಮಿಯೊಬ್ಬ ಇದ್ದಕ್ಕಿದ್ದಂತೆ ಹೈದರಾಬಾದ್ ಮೂಲದ ಇಂಜಿನಿಯರ್ ಶ್ರೀನಿವಾಸ್ ಕುಚಿಬೋಟ್ಲ ಅವರ ಮೇಲೆ ಗುಂಡು ಹಾರಿಸಿದ್ದಾನೆ.
ದಾಳಿ ವೇಳೆ ಶ್ರೀನಿವಾಸ್ ಅವರ ಜೊತೆಯಲ್ಲಿಯೇ ಇದ್ದ ಮತ್ತೊಬ್ಬ ಗೆಳೆಯನೂ ಕೂಡ ಗಾಯಗೊಂಡಿದ್ದು, ಶ್ರೀನಿವಾಸ್ ಸ್ನೇಹಿತ ಅಲೋಕ್ ಮದಸನಿಯವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ದಾಳಿ ವೇಳೆ ದುಷ್ಕರ್ಮಿಯನ್ನು ತಡೆಯಲು ಹೋದ ಮತ್ತೊಬ್ಬ ವ್ಯಕ್ತಿಗೂ ಗಾಯವಾಗಿರುವುದಾಗಿ ವರದಿಗಳು ತಿಳಿಸಿವೆ.
ಆ್ಯಡಮ್ ಪುರಿಂಟೋನ್ (51) ಎಂಬ ನಿವೃತ್ತ ನೌಕಾಪಡೆಯ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದು, ನಮ್ಮ ದೇಶವನ್ನು ಬಿಟ್ಟು ತೊಲಗಿ ಎಂದು ಕೂಗಿ ಗುಂಡು ಹಾರಿಸಿದ್ದಾನೆಂದು ಹೇಳಲಾಗುತ್ತಿದೆ. ಆರೋಪಿಯನ್ನು ಬಂಧಿಸಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಅಮೆರಿಕದಲ್ಲಿರುವ ವಿದೇಶಿ ವಲಸಿಗರನ್ನು ಹೊರ ಹಾಕುವ ಯತ್ನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾರ್ಯನಿರತರಾಗಿರುವ ಸಮಯದಲ್ಲಿಯೇ ಈ ರೀತಿಯ ಜನಾಂಗೀಯ ದಾಳಿ ನಡೆದಿರುವುದು ಅಮೆರಿಕದಲ್ಲಿರುವ ಭಾರತೀಯರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ.