ವಾಷಿಂಗ್ಟನ್: ಯೋಧರಿಗೆ ಮುಂಡಾಸು, ಹಿಜಬ್ ಹಾಗೂ ಗಡ್ಡ ಬಿಡಲು ಅನುಮತಿ ನೀಡುವ ಹೊಸ ನಿಯಾಮಾವಳಿಗಳನ್ನು ಅಮೆರಿಕ ಸೇನೆ ಪ್ರಕಟಿಸಿದೆ.
ಧಾರ್ಮಿಕ ಅಲ್ಪಸಂಖ್ಯಾತರ ಬೇಡಿಕೆಗಳನ್ನು ಈಡೇರಿಸಲು ಅಮೆರಿಕ ಸೇನೆ ಮಹತ್ವದ ಹೆಜ್ಜೆ ಇಟ್ಟಿದೆ. ಈ ಹೊಸ ನಿಯಮಾವಳಿಗಳಿಂದ ಧಾರ್ಮಿಕ ಅಲ್ಪ ಸಂಖ್ಯಾತರು ಸೇನೆಗೆ ಸೇರಲು ಇದ್ದ ಹಲವು ತೊಡಕುಗಳು ನಿವಾರಣೆಯಾಗಲಿದೆ ಎಂದು ಅಮೆರಿಕ ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಯೋಧರು ಧಾರ್ಮಿಕ ಕಾರಣಗಳಿಗಾಗಿ ವಿಶೇಷ ಅನುಮತಿಯನ್ನು ಬ್ರಿಗೇಡ್ ಮಟ್ಟದಲ್ಲೇ ಪಡೆಯಲು ಅನುಕೂಲವಾಗುವಂತೆ ಹೊಸ ನಿಯಮಾವಳಿಗಳಲ್ಲಿ ಬದಲಾವಣೆ ತರಲಾಗಿದೆ. ಅಮೆರಿಕ ಸೇನೆಯಲ್ಲಿರುವ ಸಿಖ್ ಯೋಧರು ಕರ್ತವ್ಯದಲ್ಲಿರುವಾಗ ಮುಂಡಾಸು ಧರಿಸಲು ಮತ್ತು ಗಡ್ಡ ಬಿಡಲು ಅನುಮತಿ ನೀಡುವಂತೆ ಕೋರಿ ಸಿಖ್ ಸಮುದಾಯ ಮನವಿ ಸಲ್ಲಿಸಿತ್ತು.
ಇದೊಂದು ಅತ್ಯುತ್ತಮವಾದ ತೀರ್ಮಾನವಾಗಿದ್ದು ಇದರಿಂದಾಗಿ ಅಮೆರಿಕದಲ್ಲಿ ನೆಲೆಸಿರುವ ಸಿಖ್ ಸಮುದಾಯದವರಿಗೆ ಅನುಕೂಲವಾಗಲಿದೆ. ಸಿಖ್ ಸಮುದಾಯದವರು ಅಮೆರಿಕವನ್ನು ಪ್ರೀತಿಸುತ್ತಿದ್ದು ದೇಶಕ್ಕಾಗಿ ಸೇನೆಯಲ್ಲಿ ದುಡಿಯಲು ಹಂಬಲಿಸುತ್ತಾರೆ. ಹೊಸ ನಿಯಮಾವಳಿಗಳಿಂದ ಹೆಚ್ಚಿನ ಸಿಖ್ ಯುವಕರು ಸೇನೆ ಸೇರಲು ಅನುಕೂಲವಾಗಲಿದೆ ಎಂದು ಸಂಸದ ಜೋ ಕ್ರೌಲಿ ತಿಳಿಸಿದ್ದಾರೆ.