ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಬರಾಕ್ ಒಬಾಮ ಅವರು ತಮ್ಮ ಅಧಿಕಾರಾವಧಿಯ ಕೊನೆಯ ದಿನವಾದ ಶುಕ್ರವಾರ ಅಮೆರಿಕ ಪ್ರಜೆಗಳಿಗೆ ಅಂತಿಮ ಸಂದೇಶ ರವಾನಿಸಿದ್ದು, ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಅಮೆರಿಕನ್ನರಿಗೆ ಧನ್ಯವಾದ ಹೇಳಿದ್ದಾರೆ.
ಒಬಾಮ ಅವರು ಬರೆದಿರುವ ಅಂತಿಮ ಪತ್ರವನ್ನು ವೈಟ್ ಹೌಸ್ ಇಂದು ಬಿಡುಗಡೆ ಮಾಡಿದ್ದು, ಪತ್ರದಲ್ಲಿ ಬರಾಕ್ ಒಬಾಮ ಅಮೆರಿಕ ಪ್ರಜೆಗಳಿಗೆ ಧನ್ಯವಾದ ಹೇಳಿದ್ದಾರೆ. "ಹಾಲಿ ಅಧ್ಯಕ್ಷ ಭಾವಿ ಅಧ್ಯಕ್ಷರಿಗೆ ಅಧಿಕಾರ ಬಿಟ್ಟುಕೊಡುವ ಸಂದರ್ಭದಲ್ಲಿ ಓವಲ್ ಕಚೇರಿಯಲ್ಲಿ ಪತ್ರ ಬರೆಯುವುದು ಬಹಳ ಹಿಂದಿನ ಪರಂಪರೆಯಾಗಿದೆ. ಈ ಪತ್ರದ ಉದ್ದೇಶ ಅಧಿಕಾರಾವಧಿಯಲ್ಲಿ ನಾವೇನು ಕಲಿತೆವು, ನಮಗೇನು ತಿಳಿದಿದೆ ಮತ್ತು ಯಾವ ಬುದ್ಧಿವಂತಿಕೆ ನಮ್ಮ ಅಧಿಕಾರಾವಧಿಯಲ್ಲಿ ನಮ್ಮನ್ನು ಯಶಸ್ವಿಯಾಗಿಸಿತು ಎಂಬುದನ್ನು ವಿಶ್ವ ನಾಯಕರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಈ ಪರಂಪರೆ ಆರಂಭವಾಗಿತ್ತು".
"45ನೇ ಅಧ್ಯಕ್ಷರಿಗೆ ಅಧಿಕಾರ ಬಿಟ್ಟುಕೊಡುವ ಮುನ್ನ 44ನೇ ಅಧ್ಯಕ್ಷನಾಗಿ ನಿಮ್ಮ ಸೇವೆ ಮಾಡುವ ಗೌರವ ಕೊಟ್ಟದ್ದಕ್ಕಾಗಿ ನಿಮಗೆಲ್ಲರಿಗೂ ನನ್ನ ಒಂದು ಅಂತಿಮ ಧನ್ಯವಾದ ಹೇಳ ಬಯಸುತ್ತೇನೆ. ಅಧ್ಯಕ್ಷ ಹುದ್ದೆಯಲ್ಲಿದ್ದ ಅವಧಿಯಲ್ಲಿ ನಾನೇನು ಕಲಿತಿದ್ದೇನೋ ಅದೆಲ್ಲವನ್ನೂ ನಾನು ನಿಮ್ಮಿಂದಲೇ ಕಲಿತಿದ್ದೇನೆ. ನೀವು ನನ್ನನ್ನು ಉತ್ತಮ ಅಧ್ಯಕ್ಷನನ್ನಾಗಿ ಮಾಡಿದಿರಿ. ನೀವು ನನ್ನನ್ನು ಉತ್ತಮ ಮನುಷ್ಯನನ್ನಾಗಿ ರೂಪಿಸಿದಿರಿ".
"ಕಳೆದ 8 ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ ನೀವು ನನ್ನ ಒಳ್ಳೆತನ, ಸ್ಥಿತಿಸ್ಥಾಪಕತ್ವ, ಮತ್ತು ಭರವಸೆಯ ಮೂಲವಾಗಿದ್ದಿರಿ. ದೇಶದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದ್ದಾಗ ಪರಸ್ಪರು ನೆರವಿಗೆ ಧಾವಿಸುವ ಮೂಲಕ ದೇಶದ ಐಕ್ಯತೆಯನ್ನು ನಿರೂಪಿಸಿದ್ದಿರಿ. ಚಾರ್ಲಸ್ಟನ್ ಚರ್ಚ್ನಲ್ಲಿ ನಡೆದ ಹತ್ಯಾಕಾಂಡದಂತಹ ದುಃಖಕರ ಸಂದರ್ಭದಲ್ಲಿ ನೋವಿಗೆ ಜೊತೆಯಾಗಿದ್ದಿರಿ. ಇಂದಿಗೂ ಆ ಹತ್ಯಾಕಾಂಡಕ್ಕೆ ಕಾರಣವೇನು ಎಂದು ಮೃತರ ಕುಟುಂಬಸ್ಥರು ಯೋಚಿಸುತ್ತಿದ್ದಾರೆ" ಎಂದು ಒಬಾಮ ಹೇಳಿದ್ದಾರೆ.
ಇದೇ ವೇಳೆ ತಮ್ಮ ಅಧಿಕಾರವಧಿಯಲ್ಲಿನ ಮಿಲಿಟರಿ ಬದಲಾವಣೆ, ಹಾಗೂ ವೈದ್ಯಕೀಯ ಸೇವೆಗಳಲ್ಲಿನ ಸುಧಾರಣೆಯನ್ನು ನೆನೆದ ಒಬಾಮ, ಅಮೆರಿಕನ್ನರು ಸಭ್ಯತೆಯ, ಸಂಕಲ್ಪ, ಉತ್ತಮ ಹಾಸ್ಯ ಮನೋಭಾವದವರು ಮತ್ತು ದಯೆವುಳ್ಳವರು ಎಂದು ಬಣ್ಣಿಸಿದ್ದಾರೆ. ಅಂತೆಯೇ ಅಮೆರಿಕ ನಾಗರಿಕತ್ವದ ಕುರಿತು ಮಾತನಾಡಿರುವ ಒಬಾಮ, "ಯಾವುದೇ ರಾಜಕೀಯ ಪಕ್ಷಕ್ಕೆ ನೀವು ಸೇರಿರಿ. ಆದರೆ ಪೌರತ್ವದ ಖುಷಿಯ ಚಟುವಟಿಕೆಗಳಿಗೆ ಬದ್ಧರಾಗಿ ಮತ್ತು ಉತ್ತಮ ಅಮೆರಿಕ ನಾಗರಿಕರಾಗಿರಿ ಎಂದು ತಮ್ಮ ಪತ್ರದಲ್ಲಿ ಪ್ರಜೆಗಳನ್ನು ಒತ್ತಾಯಿಸಿದ್ದಾರೆ.
"ಇನ್ನು ಮುಂದೆ ನಾನು ಕೂಡ ನಿಮ್ಮಲ್ಲಿ ಒಬ್ಬನಾಗಿ ನಿಮ್ಮ ಪ್ರತೀ ಹೆಜ್ಜೆಯಲ್ಲೂ ಪಾಲ್ಗೊಳ್ಳುತ್ತೇನೆ. ಯಾವಾಗಲೂ ಒಂದನ್ನು ನೆನಪಿನಲ್ಲಿಟ್ಟುಕೊಳ್ಳಿ...ಅಮೆರಿಕ ಓರ್ವ ವ್ಯಕ್ತಿ ಅಥವಾ ಸಂಸ್ಥೆಯ ಯೋಜನೆಯಲ್ಲ. ಪ್ರಜಾಪ್ರಭುತ್ವದಲ್ಲೇ ಅತ್ಯಂತ ಶಕ್ತಿಶಾಲಿ ಪದವೆಂದರೆ ಅದು "ನಾವು"...ನಾವು ಎಂದರೆ ಪ್ರಜೆಗಳು...ನಮ್ಮಿಂದಲೇ ಬದಲಾವಣೆ ಸಾಧ್ಯ...ಧನ್ಯವಾದಗಳು" ಎಂಬುದನ್ನು ಮರೆಯಬಾರದು ಎಂದು ಒಬಾಮ ಹೇಳಿದ್ದಾರೆ.