ವಾಷಿಂಗ್ ಟನ್: ಭಯೋತ್ಪಾದಕರು ಅಮೆರಿಕಾ ಪ್ರವೇಶಿಸುವುದನ್ನು ನಿರ್ಬಂಧಿಸಲು ಡೊನಾಲ್ಡ್ ಟ್ರಂಪ್ ಹೊರಡಿಸಿರುವ ಆದೇಶದ ಬಗ್ಗೆ ಪರ-ವಿರೋಧ ಚರ್ಚೆಗಳು ಮುಂದುವರೆಯುತ್ತಿದ್ದು, ನೂತನ ವಲಸೆ ನೀತಿಯಿಂದ ನಿಜಕ್ಕೂ ಹೊಡೆತ ಬೀಳುವುದು ಯಾರಿಗೆ ಎಂಬ ಬಗ್ಗೆ ಗೊಂದಲಗಳು ಉಂಟಾಗಿದೆ.
ಡೊನಾಲ್ಡ್ ಟ್ರಂಪ್ ಜ.27 ರಂದು ಮಧ್ಯಾಹ್ನದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದರಿಂದ, ಅಮೆರಿಕಾಗೆ ಪ್ರಯಾಣಿಸುತ್ತಿದ್ದ ಹಲವು ವಿದೇಶಿ ಪ್ರಜೆಗಳಿಗೆ ಸಂಕಷ್ಟ ಎದುರಾಗಿದ್ದು, ಹಲವರನ್ನು ವಶಕ್ಕೆ ಪಡೆದಿದ್ದ ಘಟನೆಯೂ ನಡೆದಿತ್ತು. ಆದರೆ ಅಮೆರಿಕಾದ 4 ರಾಜ್ಯಗಳ ನ್ಯಾಯಾಲಯಗಳು ಟ್ರಂಪ್ ಆದೇಶಕ್ಕೆ ತಡೆ ನೀಡಿದ್ದರಿಂದಾಗಿ ಅಧಿಕಾರಿಗಳು ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆಯುವುದನ್ನು ನಿಲ್ಲಿಸಿದ್ದರು.
ಆದರೆ ಈ ಎಲ್ಲಾ ಬೆಳವಣಿಗೆಗಳ ನಂತರ ಅಮೆರಿಕಾದ ಅಧ್ಯಕ್ಷರ ಆದೇಶ ನಿಜಕ್ಕೂ ಯಾರ ಮೇಲೆ ಪರಿಣಾಮ ಬೀರಲಿದೆ ಎಂಬ ಗೊಂದಲಗಳುಂಟಾಗಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ಹೀಗಿದೆ.
ಡೊನಾಲ್ಡ್ ಟ್ರಂಪ್ ಆದೇಶದ ಪ್ರಕಾರ ಯಾವುದೇ ದೇಶದ ನಿರಾಶ್ರಿತರು ಅಮೆರಿಕ ಪ್ರವೇಶಿಸುವುದಕ್ಕೆ 120 ದಿನಗಳ ವರೆಗೆ ನಿರ್ಬಂಧ ವಿಧಿಸಲಾಗಿದೆ. ನಂತರದ ದಿನಗಳಲ್ಲಿ 2017 ನೇ ಸಾಲಿನಲ್ಲಿ ಗರಿಷ್ಠ 50,000 ನಿರಾಶ್ರಿತರಿಗೆ ಅಮೆರಿಕ ಪ್ರವೇಶಿಸಲು ಅನುಮತಿ ನೀಡಲಿದೆ. ಅಂದರೆ ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಪ್ರವೇಶ ಪಡೆಯಲು ನಿರಾಶ್ರಿತರಿಗೆ ವಿಧಿಸಿದ್ದ 110,000 ರಲ್ಲಿ ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆಯಷ್ಟು ನಿರಾಶ್ರಿತರಿಗೆ ಡೊನಾಲ್ಡ್ ಟ್ರಂಪ್ ಅಮೆರಿಕಾದ ಒಳಗೆ ಪ್ರವೇಶ ನೀಡುವ ಸಾಧ್ಯತೆ ಇದೆ.
ಡೊನಾಲ್ಡ್ ಟ್ರಂಪ್ ನೂತನ ವಲಸೆ ನೀತಿಯ ಸಂದರ್ಭದಲ್ಲಿ 2011 ರ ಸೆ.11 ರಂದು ಅಮೆರಿಕಾದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದ ವೇಳೆ ಅಂದಿನ ಆಡಳಿತ ಸತತ ಮೂರು ತಿಂಗಳ ಕಾಲ ನಿರಾಶ್ರಿತರು ಅಮೆರಿಕಾದೊಳಗೆ ಕಾಲಿಡಲು ಬಿಡದೇ ಇದ್ದದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇನ್ನು ಭಯೋತ್ಪಾದನೆ ಪೀಡಿತ ಸಿರಿಯಾದಿಂದ ನಿರಾಶ್ರಿತರಾಗಲಿ ಅಥವಾ ಬೇರೆಯ ವ್ಯಕ್ತಿಗಳಿಗೆ ಅಮೆರಿಕ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
2011 ರಿಂದ ಈ ವರೆಗೂ ಸಿರಿಯಾದಲ್ಲಿ ಸುಮಾರು 4.8 ಮಿಲಿಯನ್ ನಷ್ಟು ಜನರು ವಲಸೆ ಹೋಗಿದ್ದು, 312,001 ಜನರು ಸಾವನ್ನಪ್ಪಿದ್ದಾರೆ ಎಂದು ಮಾನವ ಹಕ್ಕುಗಳ ಸಂಸ್ಥೆ ಅಂಕಿ-ಅಂಶಗಳು ಹೇಳಿವೆ. ಇನ್ನು ಟ್ರಂಪ್ ಗುರುತಿಸಿರುವ 7 ಮುಸ್ಲಿಂ ರಾಷ್ಟ್ರಗಳಿಂದ (ಇರಾನ್, ಇರಾಕ್, ಸೊಮಾಲಿಯಾ, ಸಿರಿಯಾ, ಸುಡಾನ್, ಲಿಬಿಯಾ, ಯೆಮೆನ್) ನಿಂದ ವಲಸೆ ಬರುವವರಿಗೆ ಅಥವಾ ಭೇಟಿ ನೀಡುವವರಿಗೆ 90 ದಿನಗಳ ವರೆಗೆ ವೀಸಾ ನಿರಾಕರಿಸಲಾಗಿದೆ. ಆದರೆ ರಾಜತಾಂತ್ರಿಕ ವೀಸಾ, ಅಂತಾರಾಷ್ಟ್ರೀಯ ಸಂಸ್ಥೆಗಳಾದ ನ್ಯಾಟೋ, ವಿಶ್ವಸಂಸ್ಥೆಗಳಿಗೆ ಸಂಬಂಧಿಸಿದ ವೀಸಾಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.
ಗೀನ್ ಕಾರ್ಡ್ ಹೊಂದಿರುವವರಿಗೆ ಸಮಸ್ಯೆ ಇಲ್ಲ: ಡೊನಾಲ್ಡ್ ಟ್ರಂಪ್ ಆದೇಶ ಅಮೆರಿಕಾದ ಪೌರತ್ವ (ಗ್ರೀನ್ ಕಾರ್ಡ್) ಹೊಂದಿರುವವರಿಗೆ ಯಾವುದೇ ರೀತಿಯಲ್ಲೂ ಪರಿಣಾಮ ಬೀರುವುದಿಲ್ಲ. ಗೃಹ ಭದ್ರತೆ ಇಲಾಖೆ ಸಚಿವ ಜಾನ್ ಕೆಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಕಾನೂನಾತ್ಮಕ ಶಾಶ್ವತ ನಿವಾಸಿಗಳಿಗೆ ಪ್ರವೇಶ ನೀಡಲಾಗುತ್ತಿದೆ ಎಂದಿದ್ದಾರೆ. ಎರಡು ರಾಷ್ಟ್ರಗಳ ಪೌರತ್ವ ಹೊಂದಿರುವವರಿಗೆ ಮಾತ್ರ ಸಮಸ್ಯೆ ಜಟಿಲವಾಗಿಯೇ ಉಳಿದಿದೆ.
ಇನ್ನು ಪಟ್ಟಿ ಮಾಡಲಾಗಿರುವ 7 ರಾಷ್ಟ್ರಗಳ ಪೈಕಿ ಯಾವುದಾದರೂ ಒಂದು ರಾಷ್ಟ್ರದ ಪಾಸ್ ಪೋರ್ಟ್ ನ್ನು ಹೊಂದಿರುವ ಅಮೆರಿಕ ಪ್ರಜೆಗಳಿಗೆ, ಬ್ರಿಟೀಷ್, ಕೆನಡಾದ ಪಾಸ್ ಪೋರ್ಟ್ ಗಳನ್ನು ಹೊಂದಿರುವವರಿಗೆ ವಿನಾಯಿತಿ ನೀಡಲಾಗಿದೆ. ಆದರೆ 7 ರಾಷ್ಟ್ರಗಳ ಪೈಕಿ ಒಂದರಲ್ಲಿ ಹಾಗೂ ಅಮೆರಿಕಾದಲ್ಲಿ ಪೌರತ್ವ ಹೊಂದಿರುವವರಿಗೆ ಡೊನಾಲ್ಡ್ ಟ್ರಂಪ್ ಆದೇಶದಿಂದ ಹೊಡೆತ ಬೀಳಲಿದ್ದು, 120 ದಿನಗಳ ವರೆಗೆ ಅಮೆರಿಕಾ ಪ್ರವೇಶ ಕಷ್ಟಸಾಧ್ಯವಾಗಲಿದೆ.