ನರೇಂದ್ರ ಮೋದಿ - ಬೆಂಜಮಿನ್ ನೆತನ್ಯಾಹು
ಟೆಲ್ ಅವೀವ್: ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಇಸ್ರೇಲಿಗೆ ಭೇಟಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಟೆಲ್ ಅವೀವ್ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಿದರು.
ಈ ವೇಳೆ ಮಾತನಾಡಿದ ಬೆಂಜಮಿನ್ ನೆತನ್ಯಾಹು ಅವರು, ನನ್ನ ಸ್ನೇಹಿತ ಮೋದಿಗೆ ಸ್ವಾಗತ ಎಂದು ಹಿಂದಿಯಲ್ಲಿ ಸ್ವಾಗತ ಕೋರಿದರು. ಅಲ್ಲದೆ ನಾವು ಭಾರತವನ್ನು ಮತ್ತು ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ ಎಂದರು.
ಭಾರತದ ಪ್ರಧಾನಿಯ ಭೇಟಿಗಾಗಿ ನಾವು 70 ವರ್ಷಗಳಿಂದ ಕಾಯುತ್ತಿದ್ದೇವೆ ಎಂದು ಬೆಂಜಮಿನ್ ನೆತನ್ಯಾಹು ಅವರು ಹೇಳಿದ್ದಾರೆ.
ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಇಸ್ರೇಲ್ ಭೇಟಿ ಅತ್ಯಂತ ಮಹತ್ವದ್ದಾಗಿದ್ದು, ಇಲ್ಲಿಗೆ ಭೇಟಿ ನೀಡುತ್ತಿರುವ ಭಾರತದ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆ ನನಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ, ಇಸ್ರೇಲಿಗೆ ಇದು ನನ್ನ ಸೀಮೋಲ್ಲಂಘನೆಯ ಭೇಟಿಯಾಗಿದೆ ಎಂದರು.
ಭದ್ರತೆ ಮತ್ತು ಸಾರ್ವಭೌಮತೆಯ ವಿಷಯದಲ್ಲಿ ಎಂಟೆದೆಯ ರಾಷ್ಟ್ರವೆಂದೇ ಖ್ಯಾತಿ ಪಡೆದಿರುವ ಇಸ್ರೇಲ್ ಜತೆಗಿನ ರಾಜತಾಂತ್ರಿಕ ಬಾಂಧವ್ಯಕ್ಕೆ 25 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಮೂರು ದಿನಗಳ ಇಸ್ರೇಲ್ ಭೇಟಿಯಲ್ಲಿ ಅಧ್ಯಕ್ಷ ರುವೆನ್ ರಿವಿನ್ ಅವರನ್ನೂ ಕಾಣುವರಲ್ಲದೆ ಉಭಯ ದೇಶಗಳ ಸಿಇಓಗಳನ್ನು ಹಾಗೂ ಇಂಡಿಯಾ ಡಯಾನ್ಪೋರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.