ಯುನೈಟೆಡ್ ನೇಷನ್ಸ್: ವಿಶ್ವದಲ್ಲಿ ಮಹಿಳಾ ಸಂಸದರ ಸಂಖ್ಯೆಯಲ್ಲಿ ಭಾರತ 148ನೇ ಸ್ಥಾನ ಹೊಂದಿದ್ದು, ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂದು ವಿಶ್ವಸಂಸ್ಥೆಯ ಮಹಿಳಾ ಮುಖ್ಯಸ್ಥೆ ಫುಮ್ಜಿಲ್ ಮ್ಲಂಬೊ-ನ್ ಕುಕಾ ಕರೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಎಲ್ಲಾ 193 ಸದಸ್ಯ ರಾಷ್ಟ್ರಗಳ ಸಂಸದರ ಸಂಖ್ಯೆ ಹಾಗೂ ಅಲ್ಲಿರುವ ಮಹಿಳಾ ಸಂಸದರ ಪಟ್ಟಿಯನ್ನು ಅಂತರ-ಸಂಸತ್ತಿನ ಒಕ್ಕೂಟ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಲೋಕಸಭೆಯಲ್ಲಿ 542 ಮಂದಿ ಸದಸ್ಯರಲ್ಲಿ 64 ಮಂದಿ ಮಹಿಳಾ ಸಂಸದರು ಇರುವ ಮೂಲಕ ಶೇಕಡಾ 11.8ರಷ್ಟು ಮತ್ತು ರಾಜ್ಯಸಭೆಯ 245 ಮಂದಿ ಸದಸ್ಯರ ಪೈಕಿ 27 ಮಂದಿ ಮಹಿಳೆಯರಿದ್ದು ಅವರ ಪ್ರಮಾಣ ಶೇಕಡಾ 11ರಷ್ಟಿದೆ.
ಮಹಿಳಾ ಸಚಿವರ ವಿಚಾರ ಬಂದಾಗ ಭಾರತ 88ನೇ ಸ್ಥಾನದಲ್ಲಿದ್ದು ಸಂಪುಟದಲ್ಲಿ ಐವರು ಅಥವಾ ಶೇಕಡಾ 18.5ರಷ್ಟು ಮಹಿಳಾ ಸಚಿವೆಯರಿದ್ದಾರೆ.
ಆದರೂ ಭಾರತದಲ್ಲಿ ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಇಬ್ಬರು ಮಹಿಳೆಯರು ಪ್ರಮುಖ ಸ್ಥಾನ ಹೊಂದಿದ್ದಾರೆ. ಸುಮಿತ್ರಾ ಮಹಾಜನ್ ಸ್ಪೀಕರ್ ಆದರೆ ಸುಷ್ಮಾ ಸ್ವರಾಜ್ ವಿದೇಶಾಂಗ ಸಚಿವೆಯಾಗಿದ್ದಾರೆ.
ಸಂಸತ್ತಿನಲ್ಲಿ ಲಿಂಗ ಸಮಾನತೆಯನ್ನು ತರಲು ಮಹಿಳೆಯರಿಗೆ ಮೀಸಲಾತಿ ತರಬೇಕು. ಇಂದಿನ ಪರಿಸ್ಥಿತಿ ನೋಡಿದರೆ ಸಂಸತ್ತಿನಲ್ಲಿ ಮಹಿಳಾ ಸಂಸದರ ಸಂಖ್ಯೆ ಪುರುಷರಷ್ಟೇ ಆಗಲು ಇನ್ನು 50 ವರ್ಷಗಳು ಬೇಕಾಗಬಹುದು ಎಂದು ಐಪಿಯು ಪ್ರಧಾನ ಕಾರ್ಯದರ್ಶಿ ಮಾರ್ಟಿನ್ ಚುಂಗೊಂಗ್ ಹೇಳುತ್ತಾರೆ.
2015ರ ಅಂಕಿಅಂಶ ಪ್ರಕಾರ ಸಂಸತ್ತಿನಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಶೇಕಡಾ 22.6 ಇದ್ದರೆ, 2016ರಲ್ಲಿ ಶೇಕಡಾ 23.3 ಆಗಿದೆ. ವಿಶ್ವದ ಮಹಿಳಾ ಸಂಸದರ ಅರ್ಧದಷ್ಟು ಭಾರತದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics