ಗಿಲ್ಗಿಟ್-ಬಾಲ್ಟಿಸ್ತಾನ್'ಗೆ 5ನೇ ಪ್ರಾಂತ್ರ್ಯ ಸ್ಥಾನಮಾನ: ಪಾಕಿಸ್ತಾನ ಹೊಸ ಕುತಂತ್ರ
ಇಸ್ಲಾಮಾಬಾದ್: ಭಾರತ ಹಾಗೂ ತನ್ನ ವಶದಲ್ಲಿರುವ ಕಾಶ್ಮೀರದೊಂದಿಗೆ ಗಡಿ ಹಂಚಿಕೊಂಡಿರುವ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶಕ್ಕೆ ಹೊಸ ಪ್ರಾಂತ್ಯದ ಸ್ಥಾನಮಾನ ನೀಡಲು ಪಾಕಿಸ್ತಾನ ನಿರ್ಧಾರ ಕೈಗೊಂಡಿದ್ದು, ಈ ಮೂಲಕ ಹೊಸ ಕುತಂತ್ರವನ್ನು ರೂಪಿಸಿದೆ.
ಗಡಿಯಲ್ಲಿ ನಿರ್ಮಾಣವಾಗಿರುವ ಪ್ರಕ್ಷುಬ್ಧ ವಾತಾವರಣದಿಂದಾಗಿ ಈಗಾಗಲೇ ಭಾರತ ಮತ್ತು ಪಾಕಿಸ್ತಾನ ಸಂಬಂಧ ಹದಗೆಟ್ಟಿದ್ದು, ಇಂತಹ ಸಂದರ್ಭದಲ್ಲಿಯೇ ಪಾಕಿಸ್ತಾನ ಈ ರೀತಿಯ ನಿರ್ಧಾರ ಕೈಗೊಂಡಿರುವುದು ಉಭಯ ರಾಷ್ಟ್ರಗಳ ಸಂಬಂಧ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ಉತ್ತರದ ಭಾಗದ ತುತ್ತತುದಿಯಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶ ಭಾರತಕ್ಕೆ ಸೇರಿದ್ದು. ಈ ಭಾಗ ಭಾರತ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಂದಿಗೆ ಗಡಿ ಹಂಚಿಕೊಂಡಿದೆ. ಈಗಲೂ ಭಾರತದ ನಕಾಶೆಯಲ್ಲಿ ಗಿಲ್ಟಿಟ್-ಬಾಲ್ಟಿಸ್ತಾನ್ ಕಾಣಿಸಿಕೊಳ್ಳುತ್ತದೆ. ಆದರೂ, ಈ ಜಾಗವನ್ನು ಬಹುಹಿಂದೆಯೇ ಪಾಕಿಸ್ತಾನ ರಾಷ್ಟ್ರ ಅಕ್ರಮವಾಗಿ ವಶಪಡಿಸಿಕೊಂಡು ಅದನ್ನು ತನ್ನ ಬಳಿಯೇ ಇಟ್ಟುಕೊಂಡಿದೆ.
ಈ ಭಾಗ ತನ್ನದೆಂದು ದಶಕಗಳಿಂದ ಹೇಳಿಕೊಂಡು ಬಂದಿದ್ದರೂ, ಪಾಕಿಸ್ತಾನ ಮಾತ್ರ ಈ ಭಾಗಕ್ಕೆ ರಾಜ್ಯದ ಸ್ಥಾನಮಾನ ನೀಡಿರಲಿಲ್ಲ. ಗಿಲ್ಗಿಟ್ ಮತ್ತು ಬಾಲ್ಟಿಸ್ತಾನದಲ್ಲಿ ನೆಪ ಮಾತ್ರಕ್ಕೆ ಚುನಾವಣೆ ನಡೆಸು ಸರ್ಕಾರವೊಂದು ಇಲ್ಲಿನ ಅಧಿಕಾರವಹಿಸಿಕೊಳ್ಳುತ್ತದೆ. ಆದರೆ, ಅಧಿಕಾರವೆಲ್ಲ ಪಾಕಿಸ್ತಾನದ ನಿಯಂತ್ರಣದಲ್ಲಿಯೇ ಇರುತ್ತದೆ. ಪಾಕಿಸ್ತಾನ ಪ್ರಧಾನಮಂತ್ರಿ ನೇತೃತ್ವದ ಮಂಡಳಿಯ ಕೈಯಲ್ಲಿ ಇಲ್ಲಿನ ಅಧಿಕಾರವಿರುತ್ತದೆ. ಇಲ್ಲಿರುವ ಸಂಪನ್ಮೂಲಗಳು ಅಲ್ಲಿಂದ ಬರುವ ಆದಯ ಎಲ್ಲವನ್ನು ನಿಯಂತ್ರಿಸುವುದು ಇದೇ ಮಂಡಳಿಯೇ ಆಗಿರುತ್ತದೆ.
ಗಿಲ್ಗಿಟ್-ಬಾಲ್ಟಿಸ್ತಾನ ಸಚಿವಾಲಯವೇ ಇಲ್ಲಿನ ಅಂತಿಮ ನಿರ್ಧಾರಗಳನ್ನು ಕೈಗೊಳ್ಳುವುದು. ಪಾಕಿಸ್ತಾನದ ಅಧೀನದಲ್ಲಿದ್ದರೂ ಕೂಡ ಬಾಲ್ಟಿಸ್ತಾನಕ್ಕೆ ಯಾವುದೇ ಸ್ಥಾನಮಾನವನ್ನು ನೀಡಿರಲಿಲ್ಲ. ಪಾಕಿಸ್ತಾನದ ಸಂವಿಧಾನದಲ್ಲಿ ಈ ಪ್ರದೇಶದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಈ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇರುವಂತಹ ಸಂದಿಗ್ಧತೆಯನ್ನು ಮುಂದುವರೆಸುವುದು ಪಾಕಿಸ್ತಾನದ ಉದ್ದೇಶವಾಗಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ಉಳಿಸಿಕೊಳ್ಳುವುದಕ್ಕಾಗಿಯೇ ಪಾಕಿಸ್ತಾನ ಈ ಪ್ರದೇಶವನ್ನು ವಿವಾದಿತ ಪ್ರದೇಶವೆಂದು ಪರಿಗಣಿಸುತ್ತದೆ ಎಂಬ ವಾದವೂ ಇದೆ.
ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವವಾದ ಈ ಸ್ಥಳಕ್ಕೆ ಇದೀಗ 5ನೇ ರಾಜ್ಯದ ಸ್ಥಾನಮಾನ ನೀಡಲು ನಿರ್ಧರಿಸಲಾಗಿದೆ ಎಂದು ಪಾಕಿಸ್ತಾನದ ಸಚಿವರೊಬ್ಬರು ಹೇಳಿದ್ದಾರೆ.
ಈ ಭಾಗದ ಮೂಲಕವೇ ಪಾಕಿಸ್ತಾನ ಮತ್ತು ಚೀನಾ ನಡುವಿನ ಪ್ರಸ್ತಾವಿತ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಹಾದುಹೋಗುತ್ತದೆ. ಸದ್ಯ ಪಾಕಿಸ್ತಾನದಲ್ಲಿ ಸಿಂಧ್, ಪಂಜಾಬ್, ಬಲೂಚಿಸ್ತಾನ್, ಖೈಬರ್ ಪಖ್ತೂನ್ ಖ್ವಾ ಎಂಬ 4 ರಾಜ್ಯಗಳಿವೆ.