ಲಂಡನ್: ಮುಸ್ಲಿಂ ರಾಷ್ಟ್ರಗಳ ವಿಮಾನ ಪ್ರಯಾಣಿಕರು ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂತಿಲ್ಲ ಎಂದು ಅಮೆರಿಕ ನಿಷೇಧ ಹೇರಿದ ಬೆನ್ನಲ್ಲೇ ಬ್ರಿಟನ್ ಕೂಡ ಅಂತಹುದೇ ನಿರ್ಧಾರ ಕೈಗೊಂಡಿದೆ.
ಜಗತ್ತಿನ ಅತ್ಯಂತ ಹೆಚ್ಚ ಪ್ರಯಾಣಿಕರು ಪ್ರಯಾಣಿಸುವ ಇಸ್ತಾಂಬುಲ್, ದುಬೈ, ದೋಹಾ ಮತ್ತು ಕತಾರ್ ಸೇರಿದಂತೆ 6 ಮುಸ್ಲಿಂ ರಾಷ್ಚ್ರಗಳ ಪ್ರಯಾಣಿಕರು ಮೊಬೈಲ್ ಗಿಂತ ದೊಡ್ಡದಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಿಮಾನದಲ್ಲಿ ಕೊಂಡೊಯ್ಯುವಂತಿಲ್ಲ ಎಂದು ಬ್ರಿಟನ್ ಸರ್ಕಾರ ಆದೇಶಿಸಿದೆ. ಈ ಆರು ದೇಶಗಳಿಂದ ಬ್ರಿಟನ್ ಗೆ ಆಗಮಿಸುವ ಯಾವುದೇ ಪ್ರಯಾಣಿಕರು ತಮ್ಮೊಂದಿಗೆ ಲ್ಯಾಪ್ ಟಾಪ್, ಐಪಾಡ್, ಕ್ಯಾಮೆರಾ ಸೇರಿದಂತೆ ವಿವಿಧ ರೀತಿಯ ಉಪಕರಣಗಳನ್ನು ವಿಮಾನದೊಳಗೆ ತರುವಂತಿಲ್ಲ ಎಂದು ಬ್ರಿಟನ್ ಸರ್ಕಾರ ನಿಷೇಧ ಹೇರಿದೆ.
ಮತ್ತೊಂದು ಪ್ರಮುಖ ಅಂಶವೆಂದರೆ ಈ ನಿಷೇಧಕ್ಕೊಳಗಾಗಿರುವ ಎಲೆಕ್ಟ್ರಾನಿಕ್ ವಸ್ತುಗಳ ಪಟ್ಟಿಗೆ ಕೆಲ ಸೆಲ್ ಫೋನ್ ಗಳನ್ನೂ ಕೂಡ ಸೇರಿಸಲು ಬ್ರಿಟನ್ ಸರ್ಕಾರ ನಿರ್ಧರಿಸಿದೆ. ಬ್ರಿಟನ್ ಗುಪ್ತಚರ ಇಲಾಖೆಯ ಸಲಹೆಯಂತೆ ಬ್ರಿಟನ್ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ನಾಗರಿಕ ವಿಮಾನಯಾನ ಸಂಸ್ಥೆಗಳ ವಿಮಾನಗಳನ್ನು ಉಗ್ರರು ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸುವ ಕುರಿತು ಈ ಹಿಂದೆ ಅಮೆರಿಕ ಗುಪ್ತಚರ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಸೋಮವಾರ ಅಮೆರಿಕ ಮತ್ತು ನಿನ್ನೆ ಬ್ರಿಟನ್ ಸರ್ಕಾರ ವಿಮಾನಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಷೇಧಿಸಿತ್ತು.