ಮಾಸ್ಕೋ: ರಷ್ಯಾದ ಪೂರ್ವ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.6 ರಷ್ಟು ತೀವ್ರತೆ ದಾಖಲಾಗಿದೆ.
ಬೇರಿಂಗ್ ಸಮುದ್ರದಿಂದ ಸುನಾಮಿ ವಲಯ ಎನ್ನಲಾಗುವ ರಿಂಗ್ ಆಫ್ ಫೈರ್ ವಲಯದ ಸುಮಾರು 22.8 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದ್ದು, ಸುನಾಮಿ ಮುನ್ಸೂಚನೆ ನೀಡಲಾಗಿತ್ತಾದರೂ, ಬಳಿಕ ಮುನ್ಸೂಚನೆಯನ್ನು ವಾಪಸ್ ಪಡೆಯಲಾಗಿದೆ. ಆದರೂ ಬೃಹತ್ ಅಲೆಗಳು ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಆ ಮೂಲಕ ಕರಾವಳಿ ತೀರದಲ್ಲಿರುವ ಲಕ್ಷಾಂತರ ಮಂದಿ ಪ್ರಾಣ ಭೀತಿಯಲ್ಲಿದ್ದು, ಮುಂಜಾಗ್ರತಾ ಕ್ರಮವಾಗಿ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ರಷ್ಯಾದ ಪೂರ್ವ ಕರಾವಳಿಯ ಪೆಟ್ರೊಪಾವ್ಲೊವ್ಸ್ಕ್ ಕಾಮ್ಚಾಟ್ ಸ್ಕಿ ಪ್ರದೇಶದಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ನೆಲೆಸಿದ್ದು, ಇದೀಗ ಇವರನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರ ಮಾಡಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಹವಾಯಿ ಮೂಲದ ಸುನಾಮಿ ಮುನ್ಸೂಚನಾ ಕೇಂದ್ರದ ಪ್ರಕಾರ ಸದ್ಯಕ್ಕೆ ಸುನಾಮಿ ಭೀತಿಯಿಲ್ಲ. ಆದರೆ, 1.5 ಮೀಟರ್ ಗೂ ಎತ್ತರದ ದೈತ್ಯ ಅಲೆಗಳು ಕರಾವಳಿಗೆ ಅಪ್ಪಳಿಸಬಹುದು ಎಂದು ಹೇಳಿದ್ದಾರೆ. ಕಂಬಲ್ನಿ ಅಗ್ನಿಪರ್ವತ ಕೂಡಾ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಕ್ರಿಯವಾಗಿ ಬೆಂಕಿಯುಗುಳುತ್ತಿದ್ದು, ಕಾಮ್ಚಾಟ್ ಸ್ಕಿ ಪ್ರದೇಶದ ಜನತೆಗೆ ಎಚ್ಚರಿಕೆಯಿಂದಿರಲು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.