ಪಾಕಿಸ್ತಾನ ಪತ್ರಕರ್ತೆ ಜೀನತ್ ಶಹಜಾದಿ
ಇಸ್ಲಾಮಾಬಾದ್: ಪಾಕಿಸ್ತಾನದ ಲಾಹೋರ್ ನಲ್ಲಿ 2015ರಲ್ಲಿ ನಾಪತ್ತೆಯಾಗಿದ್ದ ಪತ್ರಕರ್ತೆಯೊಬ್ಬರನ್ನು ಎರಡು ವರ್ಷಗಳ ಬಳಿಕ ಪತ್ತೆಯಾಗಿದ್ದಾರೆ.
ಪಾಕಿಸ್ತಾನ-ಆಫ್ಘಾನಿಸ್ತಾನದ ಗಡಿಯಲ್ಲಿ ಪತ್ರಕರ್ತೆಯನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿದ್ದು, ರಕ್ಷಣೆ ಮಾಡಿದ್ದಾರೆಂದು ತಿಳಿದುಬಂದಿದೆ.
26 ವರ್ಷದ ಜೀನತ್ ಶಹಜಾದಿ ರಕ್ಷಣೆಗೊಳಪಟ್ಟಿರುವ ಪತ್ರಕರ್ತೆಯಾಗಿದ್ದಾರೆ. ಜೀನತ್ ಅವರು ಪಾಕಿಸ್ತಾನದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಹಮೀದ್ ಅನ್ಸಾರಿ ಎಂಬಾತನ ಪರ ಹೋರಾಟ ನಡೆಸುತ್ತಿದ್ದರು.
ಭಾರತೀಯ ಪ್ರಜೆ ಹಮೀದ್ ಅನ್ಸಾರಿಯವರನ್ನು 2012ರಲ್ಲಿ ಪಾಕಿಸ್ತಾನ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪಾಕಿಸ್ತಾನದ ಯುವತಿಯನ್ನು ಭೇಟಿ ಮಾಡುವ ಸಲುವಾಗಿ ಹಮೀದ್ ಪಾಕಿಸ್ತಾನಕ್ಕೆ ಹೋಗಿದ್ದ. ಹಮೀದ್ ಆಫ್ಘಾನಿಸ್ತಾನದ ಗಡಿ ಮೂಲಕ ಪಾಕಿಸ್ತಾನವನ್ನು ಅಕ್ರಮವಾಗಿ ಪ್ರವೇಶಿಸಿ, ಬೇಹುಗಾರಿಕೆ ನಡೆಸಿದ್ದಾನೆಂದು ಆರೋಪಿಸಿ ಪಾಕಿಸ್ತಾನದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು. ಹಮೀದ್ ಈಗಲೂ ಪಾಕಿಸ್ತಾನದ ಜೈಲಿನಲ್ಲಿಯೇ ಇದ್ದು, ಪಾಕಿಸ್ತಾನ ಸುಪ್ರೀಂಕೋರ್ಟ್ ಆತನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಭಾರತೀಯ ಪ್ರಜೆ ಹಮೀದ್ ಪರ ಪಾಕಿಸ್ತಾನ ಪತ್ರಕರ್ತೆ ಜೀನತ್ ಅವರು ದನಿ ಎತ್ತಿದ್ದರು. ಇದೇ ಕಾರಣಕ್ಕೆ 2015ರ ಆ.19 ರಂದು ಕಚೇರಿಯಿಂದ ಮನೆಗೆ ಹೋಗುವ ವೇಳೆ ಜೀನತ್ ಅವರನ್ನು ಕೆಲ ದುಷ್ಕರ್ಮಿಗಳ ತಂಡ ಅಪಹರಣ ಮಾಡಿದ್ದರು.
ಪಾಕಿಸ್ತಾನ-ಆಫ್ಘಾನಿಸ್ತಾನದ ಗಡಿಯಲ್ಲಿ ಜೀನತ್ ಅವರನ್ನು ಭದ್ರತಾ ಪಡೆಗಳು ರಕ್ಷಣೆ ಮಾಡಿದೆ ಎಂದು ಕಾಣೆಯಾದ ವ್ಯಕ್ತಿಗಳ ಆಯೋಗದ ಮುಖ್ಯಸ್ಥ ಹಾಗೂ ನಿವೃತ್ತ ನ್ಯಾಯಮೂರ್ತಿ ಜಾವೇದ್ ಇಕ್ಬಾಲ್ ಅವರು ಹೇಳಿದ್ದಾರೆ.