ವಿದೇಶ

ಜಪಾನ್ ಬುಲೆಟ್ ರೈಲು ಬೆನ್ನಲ್ಲೇ ಭಾರತಕ್ಕೆ ಚೀನಾದಿಂದ ಹೈ ಸ್ಪೀಡ್ ರೈಲು ಪ್ರಸ್ತಾವನೆ!

Srinivasamurthy VN
ಬೀಜಿಂಗ್: ಜಪಾನ್ ಬುಲೆಟ್ ರೈಲು ಅಳವಡಿಕೆಗೆ ಭಾರತ ಯೋಜನೆ ರೂಪಿಸಿದ ಬೆನ್ನಲ್ಲೇ ಚೀನಾ ದೇಶ ಕೂಡ ಭಾರತಕ್ಕೆ ತನ್ನ ಹೈ ಸ್ಪೀಡ್ ರೈಲುಗಳ ಮಾರಾಟಕ್ಕೆ ಮುಂದಾಗಿದ್ದು, ಈ ಬಗ್ಗೆ ಭಾರತ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಮುಂದಾಗಿದೆ.
ಭಾರತ ಮತ್ತು ಜಪಾನ್ ದೇಶಗಳ ಸ್ನೇಹದ ಪ್ರತೀಕವಾಗಿರುವ ಬುಲೆಟ್ ರೈಲು ಯೋಜನೆ ಚೀನಾ ದೇಶ ಬೆರಗು ಗಣ್ಣಿನಿಂದ ನೋಡುತ್ತಿದ್ದು, ಇದೀಗ ಭಾರತದಲ್ಲಿ ತನ್ನ ಹೈಸ್ಪೀಡ್ ರೈಲು ಓಡಿಸಲು ಚೀನಾ ಪ್ರಸ್ತಾವನೆಯೊಂದನ್ನು  ಭಾರತ ಸರ್ಕಾರದ ಮುಂದಿಡಲು ಮುಂದಾಗಿದೆ. ಚೀನಾ ಸರ್ಕಾರ ತನ್ನ ಹೈಸ್ಪೀಡ್ ರೈಲುಗಳ ಮಾರುಕಟ್ಟೆ ವಿಸ್ತರಿಸಲು ಮುಂದಾಗಿದ್ದು, ವಿದೇಶಗಳಲ್ಲಿ ತನ್ನ ಹೈಸ್ಪೀಡ್ ರೈಲುಗಳ ಓಡಿಸಲು ಚೀನಾ ಸರ್ಕಾರ ಯೋಜನೆ ರೂಪಿಸಿದೆ.  ಇದರ ಪ್ರಥಮ ಹಂತವಾಗಿ ಭಾರತದೊಂದಿಗೆ ಒಪ್ಪಂದ ವೇರ್ಪಡಿಸಲು ಚೀನಾ ಮುಂದಾಗಿದ್ದು, ಭಾರತದಲ್ಲಿ ತನ್ನ ಯೋಜನೆ ಯಶಸ್ವಿಯಾದರೆ ವಿಶ್ವದ ಇತರೆ ದೇಶಗಳಲ್ಲೂ ಮಾರುಕಟ್ಟೆ ವೃದ್ಧಿಗೆ ನೆರವಾಗುತ್ತದೆ ಎಂಬುದು ಚೀನಾ  ಯೋಜನೆಯಾಗಿದೆ.

ಇದೇ ಕಾರಣಕ್ಕೆ ಚೀನಾ ತನ್ನ ಹೈಸ್ಪೀಜ್ ರೈಲು ಯೋಜನೆ ವಿಸ್ತಾರಕ್ಕೆ ಭಾರತವನ್ನು ಕೇಂದ್ರವಾಗಿರಿಸಿಕೊಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  ಪ್ರಸ್ತುತ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರ ಭಾರತ ಭೇಟಿ  ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಕ್ರಿಯಿಸಿರುವ ಚೀನಾ ತನ್ನ ಹೈ ಸ್ಪೀಡ್ ರೈಲು ಯೋಜನೆ ವಿಸ್ತರಣೆಗೂ ಭಾರತದ ಮುಂದೆ ಪ್ರಸ್ತಾಪವನ್ನಿಟ್ಟಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಗೆಂಗ್  ಶೌಂಗ್, "ಜಪಾನ್-ಭಾರತ ರೈಲು ಸಹಕಾರ ವೃದ್ಧಿಸುತ್ತಿರುವ ಬೆಳವಣಿಗೆಯ ಬಗ್ಗೆ ಸಂತಸವಿದೆ. ಜಪಾನ್ ರೀತಿಯಲ್ಲೇ ಭಾರತದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಉತ್ತೇಜಿಸಲು ಚೀನಾ ಸಿದ್ಧವಿದೆ ಎಂದು ಹೇಳಿದ್ದಾರೆ.

ಅಂತೆಯೇ "ರೈಲ್ವೆ ಸಹಕಾರಕ್ಕೆ ಸಂಬಂಧಪಟ್ಟಂತೆ ಅದು ಜಪಾನ್-ಭಾರತದ ನಡುವಿನ ರಾಜಕೀಯ ಸಹಕಾರದ ಒಂದು ಭಾಗವಾಗಿದ್ದು, ಚೀನಾ ಕೂಡ ಭಾರತ ಸೇರಿದಂತೆ ಇತರೆ ರಾಷ್ಟ್ರಗಳೊಂದಿಗೆ ಸೇರಿ ಮೂಲ ಸೌಕರ್ಯ  ವೃದ್ಧಿಗೆ ಸಹಕಾರ ನೀಡಲು ಸಿದ್ಧವಿದ್ದೇವೆ. ಈಗಾಗಲೇ ಭಾರತೀಯ ರೈಲ್ವೇ ಇಲಾಖೆಯೊಂದಿಗೆ ಚೀನಾ ಹಲವು ಯೋಜನೆಗಳಲ್ಲಿ ಪಾಲ್ಗೊಂಡಿದೆ ಎಂದೂ ಗೆಂಗ್ ಶೌಂಗ್ ಹೇಳಿದ್ದಾರೆ.
SCROLL FOR NEXT