ವಿದೇಶ

ಮಾತುಕತೆ ಮೂಲಕ ಭಾರತ-ಪಾಕ್​ ನಡುವಿನ ಸಮಸ್ಯೆ ಬಗೆಹರಿಸಲು ಸಾಧ್ಯ: ಪಾಕ್ ಸೇನಾ ಮುಖ್ಯಸ್ಥ

Srinivasamurthy VN
ಇಸ್ಲಾಮಾಬಾದ್​: ಮಾತುಕತೆ ಮೂಲಕ ಮಾತ್ರ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್​ ಕಮರ್ ಜಾವೇದ್ ಬಾಜ್ವಾ ಹೇಳಿದ್ದಾರೆ.
ಅತ್ತ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಗೆ ಸಿಖ್​ ಯಾತ್ರಿಕರ ಭೇಟಿಗೆ ಅವಕಾಶ ನೀಡದ ಪಾಕ್ ನಡೆ ವಿರುದ್ಧ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಭಾರತ-ಪಾಕ್ ಸಮಸ್ಯೆಗಳ ಕುರಿತು ಮಾತನಾಡಿರುವ ಜನರಲ್​ ಕಮರ್ ಜಾವೇದ್ ಬಾಜ್ವಾ, ಸಮಗ್ರವಾದ ಮತ್ತು ಅರ್ಥಪೂರ್ಣ ಮಾತುಕತೆ ಮೂಲಕ ಕಾಶ್ಮೀರ ಸಮಸ್ಯೆ ಸೇರಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಎಲ್ಲ ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸಲು ಸಾಧ್ಯ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಕಕುಲ್​ನಲ್ಲಿರುವ ಪಾಕಿಸ್ತಾನ ಮಿಲಿಟರಿ ಅಕಾಡೆಮಿಯಲ್ಲಿ ನಡೆದ ಕೆಡೆಟ್​ಗಳ ಪಾಸಿಂಗ್​ ಔಟ್​ ಪೆರೇಡ್​ನಲ್ಲಿ ಪಾಲ್ಗೊಂಡು ಮಾತನಾಡಿದ ಜನರಲ್​ ಕಮರ್ ಜಾವೇದ್ ಬಾಜ್ವಾ, "ಪಾಕಿಸ್ತಾನ ಶಾಂತಿಯನ್ನು ಬಯಸುವ ರಾಷ್ಟ್ರ, ಪ್ರಪಂಚದ ಎಲ್ಲ ರಾಷ್ಟ್ರಗಳೊಂದಿಗೆ ಸೌಹಾರ್ದಯುತ ಮತ್ತು ಶಾಂತಿಯುತ ಸಂಬಂಧ ಹೊಂದಲು ಬಯಸುತ್ತಿದೆ. ಪ್ರಮುಖವಾಗಿ ತನ್ನ ನೆರೆಯ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧ ವೃದ್ಧಿಸಿಕೊಳ್ಳಲು ಬಯಸುತ್ತದೆ ಎಂದು ಅವರು ಹೇಳಿದ್ದಾರೆ. 
ಅಂತೆಯೇ ನಾವು ಶಾಂತಿಯನ್ನು ಬಯಸುತ್ತೇವೆ ಎಂಬುದು ನಮ್ಮ ದೌರ್ಬಲ್ಯವಲ್ಲ. ನಮ್ಮ ಸೇನೆ ಎಂತಹುದೇ ಸನ್ನಿವೇಶವನ್ನು ಎದುರಿಸಲು ಸದಾ ಸಿದ್ಧವಿದ್ದು, ವೈರಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಮರ್ಥವಾಗಿದೆ. ಪಾಕಿಸ್ತಾನವು ಭಯೋತ್ಪಾದಕರು ಮತ್ತು ಉಗ್ರವಾದದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಈ ಮೂಲಕ ಪಾಕಿಸ್ತಾನವನ್ನು ಸುರಕ್ಷಿತ, ಸಮೃದ್ಧ ಮತ್ತು ಪ್ರಗತಿಪರ ರಾಷ್ಟ್ರವಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಬಾಜ್ವಾ ಉಗ್ರರ ವಿರುದ್ಧ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.
SCROLL FOR NEXT