ನವದೆಹಲಿ: ಈ ಹಿಂದೆಯೇ ಚೀನಾದ ಮಹತ್ವಾಕಾಂಕ್ಷಿ ಯೋಜನೆ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಸೆಡ್ಡು ಹೊಡೆಯುವ ಕುರಿತು ಮುನ್ಸೂಚನೆ ನೀಡಿದ್ದ ಭಾರತ, ಇದೀಗ ಅದಕ್ಕೆ ತಕ್ಕಂತೆ ಮಹತ್ವದ ಹೆಜ್ಜೆ ಹಾಕಿದ್ದು, ಆಸ್ಚ್ರೇಲಿಯಾ, ಅಮೆರಿಕ, ಜಪಾನ್ ಸಹಭಾಗಿತ್ವ ಹೊಸ ಪ್ರಾದೇಶಿಕ ಮೂಲಸೌಕರ್ಯ ಯೋಜನೆಗೆ ಕೈ ಹಾಕಿದೆ.
ಈ ಬಗ್ಗೆ ಸ್ವತಃ ಅಮೆರಿಕದ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದು, ಧಕ್ಷಿಣ ಏಷ್ಯಾದಲ್ಲಿ ಒನ್ ಬೆಲ್ಟ್ ಮತ್ತು ಒನ್ ರೋಡ್ ಯೋಜನೆ ಮೂಲಕ ಚೀನಾ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತ, ಅಮೆರಿಕ, ಜಪಾನ್, ಆಸ್ಚ್ರೇಲಿಯಾ ಸಹಭಾಗಿತ್ವದಲ್ಲಿ ಪರ್ಯಾಯವಾಗಿ ಹೊಸ ಯೋಜನೆ ಆರಂಭಿಸುವ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಆಸ್ಟ್ರೇಲಿಯನ್ ಫೈನಾನ್ಷಿಯಲ್ ರಿವ್ಯೂ ಪತ್ರಿಕೆ ವರದಿ ಮಾಡಿದೆ.
ಈ ನಾಲ್ಕು ರಾಷ್ಟ್ರಗಳು ಒಗ್ಗೂಡಿ ಹೊಸ ಪ್ರಾದೇಶಿಕ ಮೂಲಸೌಕರ್ಯ ಯೋಜನೆಗೆ ಮುಂದಾಗಿದ್ದು, ಈ ಹೊಸ ಯೋಜನೆ ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್‌ಬುಲ್ ಅವರು ಈ ವಾರದ ಕೊನೆಯಲ್ಲಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಈ ಹಿಂದೆ ಆಸಿಸ್ ಪ್ರಧಾನಿಗಳ ಪ್ರವಾಸದ ವೇಳೆ ಯೋಜನೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಪ್ರವಾಸದ ವೇಳೆ ಯೋಜನೆ ಘೋಷಣೆ ಮಾಡುವುದು ಅನುಮಾನ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೂತನ ಯೋಜನೆಯಲ್ಲಿ ಬಂದರುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ರೈಲು ಸೌಕರ್ಯ ಕಲ್ಪಿಸಲಾಗುತ್ತದೆ. ಈ ಯೋಜನೆಯನ್ನು ಚೀನಾದ ಯೋಜನೆಯ ಪ್ರತಿಸ್ಪರ್ಧಿ ಎನ್ನುವುದಕ್ಕಿಂತ ಪರ್ಯಾಯ ಎಂದರೆ ಸೂಕ್ತ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜಪಾನ್ ನ ಸಂಪುಟ ಕಾರ್ಯದರ್ಶಿ ಯೊಶಿಹಿದೆ ಸುಗಾ ಅವರು, ‘ಜಪಾನ್, ಅಮೆರಿಕ, ಆಸ್ಟ್ರೇಲಿಯಾ, ಭಾರತವು ತಮ್ಮ ಸಮಾನ ಹಿತಾಸಕ್ತಿಯ ಕುರಿತು ಪರಸ್ಪರರ ಅಭಿಪ್ರಾಯಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಲೇ ಬಂದಿವೆ’ ಎಂದಿದ್ದಾರೆ.