ಹಣ ಬಿಡುಗಡೆಗೆ ಸಿಗದ ಅನುಮೋದನೆ, ಅಮೆರಿಕ ಸರ್ಕಾರ ಸ್ಥಗಿತ!
ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಆಡಳಿತದ ಬಿಕ್ಕಟ್ಟು ಎದುರಾಗಿದ್ದು, ನಿರ್ದಿಷ್ಟ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ವಿಫಲವಾದ ಹಿನ್ನಲೆಯಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಅಧಿಕೃತವಾಗಿ ಸ್ಥಗಿತಗೊಂಡಿದೆ...
ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಆಡಳಿತದ ಬಿಕ್ಕಟ್ಟು ಎದುರಾಗಿದ್ದು, ನಿರ್ದಿಷ್ಟ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ವಿಫಲವಾದ ಹಿನ್ನಲೆಯಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಅಧಿಕೃತವಾಗಿ ಸ್ಥಗಿತಗೊಂಡಿದೆ.
ಕೆಲ ಯೋಜನೆಗಳ ಬಜೆಟ್ ಕುರಿತಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವಿರೋಧಿ ಡೆಮಾಕ್ರಟಿಕ್ ಪಕ್ಷಗಳ ನಡುವೆ ಒಮ್ಮತಕ್ಕೆ ಬಾರದೇ ಇರುವುದು ಸರ್ಕಾರ ಸ್ಥಗಿತಗೊಂಡಿರುವುದಕ್ಕೆ ಕಾರಣವಾಗಿದೆ.
ವೆಚ್ಚ ಮಸೂದೆ ಪಾಸಾಗಲು ನಿನ್ನೆ ಮಧ್ಯರಾತ್ರಿ ಗಡುವಾಗಿತ್ತು. ಆದರೆ, ಮಸೂದೆ ಅಂಗೀಕಾರಗೊಳ್ಳುವುದಕ್ಕೆ ಅಗತ್ಯವಿರುವಷ್ಟು ಮತಗಳು ಸೆನೆಟ್'ನಲ್ಲಿ ಇರಲಿಲ್ಲ. ಮಸೂದೆ ಪಾಸಾಗುವುದಕ್ಕೆ ಇದ್ದ ಗಡುವು ನಿನ್ನೆ ಮಧ್ಯರಾತ್ರಿ ಮುಗಿದ ಬಳಿಕವೂ ಚರ್ಚೆ ಮಾತುಕತೆಗಳು ಮುಂದುವರೆದಿತ್ತು.
ಟ್ರಂಪ್ ಮತ್ತು ಕಾಂಗ್ರೆಸ್ ನಡುವೆ ಮಾತುಕತೆ ನಡೆದರೂ ಸರ್ಕಾರ ಸ್ಥಗಿತಗೊಳ್ಳುವುದನ್ನು ತಡೆಯಲು ಸಾಧ್ಯವಾಗಿಲ್ಲ. ಇದರಂತೆ ಶುಕ್ರವಾರ ಮಧ್ಯರಾತ್ರಿ ಫೆಡರಲ್ ಸರ್ಕಾರ ತನ್ನ ಬಾಗಿಲನ್ನು ಮುಚ್ಚಿದೆ.
ಮಸೂದೆ ಅನುಮೋದನೆಗೊಳ್ಳದ ಪರಿಣಾಮ ವಸ್ತುತಃ ಅಮೆರಿಕ ಸರ್ಕಾರ ತಾಂತ್ರಿಕವಾಗಿ ಖರ್ಚು ನಿಭಾವಣೆಗೆ ಚಿಕ್ಕಾಸು ಕೂಡ ಇಲ್ಲದ ಸ್ಥಿತಿಗೆ ತಲುಪಿದೆ.
ಮಸೂದೆ ಅನುಮೋದನೆಗೊಳ್ಳದ ಕಾರಣ, ಅಮೆರಿಕದಲ್ಲಿ ನಡೆಯುತ್ತಿದ್ದ ಸಾಕಷ್ಟು ಯೋಜನೆಗಳು ಹಠಾತ್ತನೆ ನಿಂತು ಹೋಗಿವೆ. ಕೋಟ್ಯಾಂತರ ಡಾಲರ್ ವಹಿವಾಟು ಅಷ್ಟೇ ಅಲ್ಲದೆ, ಸರ್ಕಾರಕ್ಕೆ ಬರೇಬೇಕಿದ್ದ ಹಣ ನಿಂತುಹೋಗಿದೆ. ತಾತ್ಕಾಲಿಕ ಬಜೆಟ್ ನ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳು, ಸೇವಾ ಯೋಜನೆಗಳು, ಆಂತರಿಕ ಭದ್ರತೆ, ಗುಪ್ತಚರದಳ ಮುಂದಾದ ವಿಭಾಗಗಳಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿರುವ ನೌಕರರಿಗೆ ನೀಡಲು ಹಣ ಇಲ್ಲದ ಕಾರಣ, ರಜೆ ಘೋಷಿಸುವ ಪರಿಸ್ಥಿತಿ ಎದುರಾಗಿದೆ. ಅಮೆರಿಕದ ಖಜಾನೆಯಲ್ಲಿ ಹಣ ಇಲ್ಲದ ಕಾರಣ ಯೋಜನೆಗಳಿಗೆ ನಿಗದಿಯಾದ ಹಣ ಮಂಜೂರಾತಿ ಇಲ್ಲದೆ, ಯೋಜನೆ ವ್ಯಾಪ್ತಿಯ ನೌಕರರಿಗೆ ವೇತನ ಸಿಗದ ಪರಿಸ್ಥಿತಿ ಎದುರಾಗಿದೆ.
ಪ್ರಸ್ತುತ ಅಮೆರಿಕದಲ್ಲಿ ಎದುರಾಗಿರುವ ಬಿಕ್ಕಟ್ಟು, ನಿರ್ದಿಷ್ಟ ದೇಶಗಳಿಂದ ವಲಸೆ ಬಂದವರಿಗೆ ಅನುಮತಿ ನೀಡುವುದು, ಸೇನಾ ಸಿಬ್ಬಂದಿಗಳಿಗೆ ಹೆಚ್ಚು ಹಣ ನಗದಿ ಮಾಡುವುದು ಮತ್ತು ಮೆಕ್ಸಿಕೋ ಗಡಿಯಲ್ಲಿ ಗೋಡೆ ಕಟ್ಟಲು ಅಗತ್ಯ ಹಣ ನಿಗದಿ ಮಾಡುವುದಕ್ಕೆ ಸಂಬಂಧಿಸಿದ್ದಾಗಿದೆ.
ಅಮೆರಿಕ ಅಧ್ಯಕ್ಷ ವಲಸೆ ನೀತಿಯನ್ನು ಬದಲಿಸಬೇಕೆಂದು ಹೇಳಿದ್ದರು, ಬುದ್ದಿವಂತಿಕೆ, ಪ್ರತಿಭೆ ಆಧರಿಸಿ ವಲಸೆಗೆ ಅವಕಾಶ ನೀಡಬೇಕೆನ್ನುವುದು ಟ್ರಂಪ್ ಅವರ ನಿಲುವಾಗಿದೆ. ಹೀಗಾಗಿ, ಇತರ ಎಲ್ಲಾ ರೀತಿಯ ವಲಸೆಯನ್ನು ನಿಲ್ಲಿಸಲು ಟ್ರಂಪ್ ಅವರು ಬಯಸಿದ್ದರು.
ಯಾವುದೇ ದಾಖಲೆಗಳಿಲ್ಲದೆ ವಲಸಿಗರಾಗಿ ಬಂದಿರುವ ಮಕ್ಕಳಿಗೆ ಹಿಂದಿನ ಸರ್ಕಾರ ಅಮೆರಿಕದ ಭಾಗವಾಗಲು ಅವಕಾಶವನ್ನು ನೀಡಿತ್ತು. ಮೆಕ್ಸಿಕೋ, ಎಲ್ ಸಲ್ವೆಡಾರ್, ಗ್ವಾಟೆಮಾಲಾ, ಹೊಂಡುರಾಸ್ ಮುಂತಾದ ಬಡದೇಶಗಳಿಂದ ವಲಸೆ ಬಂದ 9 ಲಕ್ಷ ಜನರಿದ್ದಾರೆ.
2012ಕ್ಕೆ 31 ವರ್ಷ ಮೀರದ ಈ ದೇಶಗಳ ವಲಸಿಗರಿಗೆ ದೇಶದಲ್ಲಿ ಇರಲು ನಿರ್ದಿಷ್ಟ ಯೋಜನೆಯ ಅನ್ವಯ ಅವಕಾಶವನ್ನು ಮಾಡಿಕೊಡಲಾಗಿತ್ತು. ಈ ದೇಶಗಳ ಜನರು ನಮಗೇಕೆ ಬೇಕು ಎಂದು ಟ್ರಂಪ್ ಇತ್ತೀಚೆಗಷ್ಟೇ ಪ್ರಶ್ನೆ ಮಾಡಿದ್ದರು. ಇದರ ಬೆನ್ನಲ್ಲೇ ಆ ಯೋಜನೆ ವಿಸ್ತರಿಸುವ ಮತ್ತು ಅದಕ್ಕೆ ಅಗತ್ಯವಾದ ಹಣಕಾಸು ವ್ಯವಸ್ಥೆ ಕಲ್ಪಿಸುವ ಪ್ರಸ್ತಾವದ ಬಜೆಟ್ ಇದೀಗ ಕಾಂಗ್ರೆಸ್ ಮುಂದೆ ಬಂದಿತ್ತು.
ವಿರೋಧಿ ಡೆಮಾಕ್ರಟಿಕ್ ಪಕ್ಷದ ಸದಸ್ಯರು ಟ್ರಂಪ್ ಅವರ ಕೀಳು ಮಾತುಗಳನ್ನು ಖಂಡಿಸಿದ್ದರಲ್ಲದೆ, ಆ ವಲಸಿಗರನ್ನು ಕಾಯಂ ಪ್ರಜೆಗಳೆಂದು ಘೋಷಿಸಬೇಕೆಂದು ಆಗ್ರಹ ಮಾಡಿದ್ದರು. ಇದನ್ನು ಟ್ರಂಪ್ ಅವರು ಬಲವಾಗಿ ವಿರೋಧಿಸಿದ್ದರು.
ಪ್ರಜಾಪ್ರತಿನಿಧಿ ಸಭೆಯಲ್ಲಿ ಮೊದಲು ಚರ್ಚೆಯಾಗಿ ನಂತರ ಈ ಪ್ರಸ್ತಾವ ಸೆನೆಟ್ ಬಂದಾಗ ಡೆಮಾಕ್ರಮಟಿಕ್ ಸದಸ್ಯರು ಆದರ ಪರಿವಾಗಿ ವಾದ ಮಾಡಿದ್ದರು. ದೇಶದ ರಕ್ಷಣೆಗೆ ಮತ್ತು ಮೆಕ್ಸಿಕೋ ಗಡಿಯಲ್ಲಿ ಗೋಡೆ ಕಟ್ಟಲು ಅಗತ್ಯವಾದ ಹಣದ ಕೋರಿಕೆಯೂ ಬಜೆಟ್ ಪ್ರಸ್ತಾವದಲ್ಲಿತ್ತು. ಟ್ರಂಪ್ ಅವರ ಈ ಪ್ರಸ್ತಾವವನ್ನು ಡೆಮಾಕ್ರಟಿಕ್ ಪಕ್ಷದ ಸದಸ್ಯರು ತಿರಸ್ಕರಿಸಿದ್ದರು. ಹೀಗಾಗಿ ಅಮೆರಿಕದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ.